ಮಂಗಳೂರು: ನಗರದ ಎಂ.ಜಿ. ರಸ್ತೆ ಮತ್ತು ಕೊಡಿಯಾಲ್ ಗುತ್ತು ಭಾಗದ ಪ್ರಮುಖ ಅಭಿವೃದ್ಧಿ ಯೋಜನೆಗಳ ಶ್ರೇಯಸ್ಸು ಪಡೆಯುವ ವಿಚಾರದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮತ್ತು ಕಾಂಗ್ರೆಸ್ ನಾಯಕ ಐವನ್ ಡಿಸೋಜಾ ನಡುವೆ ಹಸಿಬಿಸಿ ವಾಗ್ವಾದ ಆರಂಭವಾಗಿದೆ. "ನಾನು ಮಂಜೂರು ಮಾಡಿಸಿದ ಕೆಲಸಗಳಿಗೆ ಕಾಂಗ್ರೆಸ್ ನಾಯಕರು ತಾವೇ ಹರಿಕಾರರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ" ಎಂದು ಶಾಸಕ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ನಗರದ ಅಟಲ್ ಸೇವಾ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೊಡಿಯಾಲ್ ಗುತ್ತು ವೆಟ್‌ವೆಲ್‌ನಿಂದ ಕುದ್ರೋಳಿ ವೆಟ್‌ವೆಲ್‌ವರೆಗೆ ಹಾಳಾಗಿದ್ದ 25 ವರ್ಷ ಹಳೆಯದಾದ ಪಂಪಿಂಗ್ ಪೈಪ್‌ಲೈನ್ ಬದಲಿಸಲು 3.42 ಕೋಟಿ ರೂ. ಮೊತ್ತದ ಯೋಜನೆ ಮಂಜೂರಾಗಿದೆ. ಅದೇ ರೀತಿ, ಎಂ.ಜಿ. ರಸ್ತೆಯಲ್ಲಿ ಮಳೆಗಾಲದಲ್ಲಿ ಉಂಟಾಗುವ ನೆರೆ ಸಮಸ್ಯೆ ನೀಗಿಸಲು ಹ್ಯೂಮ್ ಪೈಪ್‌ಗಳ ಬದಲಿಗೆ 1.20 ಕೋಟಿ ರೂ. ವೆಚ್ಚದಲ್ಲಿ ಆಧುನಿಕ 'ಬಾಕ್ಸ್ ಕಲ್ವರ್ಟ್' ನಿರ್ಮಿಸಲಾಗುತ್ತಿದೆ. ಈ ಎರಡೂ ಯೋಜನೆಗಳಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದು ಕಾರ್ಯಾದೇಶ (Work Order) ನೀಡಲಾಗಿದೆ ಎಂದು ಶಾಸಕರು ಸ್ಪಷ್ಟಪಡಿಸಿದರು.
ಐವನ್ ಡಿಸೋಜಾ ವಿರುದ್ಧ ಕಿಡಿ:
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ಹೆಸರನ್ನು ಪ್ರಸ್ತಾಪಿಸಿದ ಶಾಸಕರು, "ಈ ಕೆಲಸಗಳು ಆರಂಭವಾಗುವ ಹಂತದಲ್ಲಿರುವಾಗ ಐವನ್ ಡಿಸೋಜಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದು ಹಾಸ್ಯಾಸ್ಪದ. ನಾವು ಮಂಜೂರು ಮಾಡಿಸಿದ ಕೆಲಸಕ್ಕೆ ಅವರು ಕ್ರೆಡಿಟ್ ಪಡೆಯಲು ನಾಟಕವಾಡುತ್ತಿದ್ದಾರೆ. ದಾಖಲೆಗಳು ನಮ್ಮ ಪರವಾಗಿವೆ, ಐವನ್ ಡಿಸೋಜಾ ಅವರು ತಾವು ಮಾಡಿಸಿದ ಕೆಲಸಕ್ಕೆ ಸರ್ಕಾರಿ ಆದೇಶದ ಪ್ರತಿ ತೋರಿಸಲಿ" ಎಂದು ಸವಾಲು ಹಾಕಿದರು.
ಹೋರ್ಡಿಂಗ್ಸ್ ಹಗರಣದ ಆರೋಪ:
ಮಂಗಳೂರಿನ ಸ್ಥಳೀಯ ಹೋರ್ಡಿಂಗ್ಸ್ ಮಾಲೀಕರಿಗೆ ಅನ್ಯಾಯ ಮಾಡಿ, ಬೆಂಗಳೂರು ಮತ್ತು ತಮಿಳುನಾಡಿನ ದೊಡ್ಡ ಕಂಪನಿಗಳಿಗೆ ಟೆಂಡರ್ ನೀಡಲು ಕಾಂಗ್ರೆಸ್ ಸರ್ಕಾರ ಸಂಚು ರೂಪಿಸಿದೆ ಎಂದು ಕಾಮತ್ ಆರೋಪಿಸಿದರು. ಈ ಕುರಿತು ನ್ಯಾಯಾಲಯದ ಮೊರೆ ಹೋಗಿರುವ ಸ್ಥಳೀಯರಿಗೆ ಕಾಂಗ್ರೆಸ್ ನಾಯಕರು ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವರು ಘೋಷಿಸಿದ್ದ 75 ಕೋಟಿ ರೂ. ಅನುದಾನ ಇನ್ನೂ ಮಂಗಳೂರಿಗೆ ತಲುಪಿಲ್ಲ. ಕೇವಲ ಪ್ರಚಾರಕ್ಕಾಗಿ ಸುಳ್ಳು ಭರವಸೆಗಳನ್ನು ನೀಡಲಾಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ದಿವಾಕರ್ ಪಾಂಡೇಶ್ವರ, ನಿಕಟಪೂರ್ವ ಪಾಲಿಕೆ ಸದಸ್ಯರಾದ ಮನೋಹರ್ ಕದ್ರಿ, ಶಕಿಲಾ ಕಾವ, ಪ್ರಮುಖರಾದ ಲಲೇಶ್ ಕುಮಾರ್, ಅಶ್ವಿತ್ ಕೊಟ್ಟಾರಿ, ಮೋಹನ್ ಪೂಜಾರಿ, ಪ್ರವೀಣ್ ನಿಡ್ಡೇಲ್ ಉಪಸ್ಥಿತರಿದ್ದರು.