image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ

ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ

ನವದೆಹಲಿ: ಕಾಲೇಜು ಪ್ರವೇಶಾತಿ ಪ್ರಕ್ರಿಯೆಗಳು ಆರಂಭವಾಗುತ್ತಿರುವ ಬೆನ್ನಲ್ಲೇ ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಅಚ್ಚರಿಯ ವರದಿಯನ್ನು ಬಹಿರಂಗಪಡಿಸಿದೆ. ಫೆಬ್ರವರಿ 2026 ರ ಹೊಸ ಅಪ್ಡೇಟ್ ಪ್ರಕಾರ, ಯುಜಿಸಿ ದೇಶಾದ್ಯಂತ ಕಾರ್ಯನಿರ್ವಹಿಸುತ್ತಿರುವ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 32 ಶಿಕ್ಷಣ ಸಂಸ್ಥೆಗಳನ್ನು ಅನಧಿಕೃತ ಹಾಗೂ ನಕಲಿ ಎಂದು ಘೋಷಿಸಲಾಗಿದೆ. ಇದರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೇ ಅತಿ ಹೆಚ್ಚು ಅಂದರೆ 12 ನಕಲಿ ವಿವಿಗಳು ಪತ್ತೆಯಾಗಿವೆ. ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಶಾಸನಬದ್ಧ ಸಂಸ್ಥೆಯಾಗಿರುವ ಯುಜಿಸಿ, ಈ ನಕಲಿ ವಿವಿಗಳ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. "ಈ ನಕಲಿ ಸಂಸ್ಥೆಗಳು ನೀಡುವ ಪದವಿಗಳಿಗೆ ಯಾವುದೇ ರೀತಿಯ ಕಾನೂನು ಮಾನ್ಯತೆ ಇರುವುದಿಲ್ಲ. ಈ ಪದವಿ ಪ್ರಮಾಣಪತ್ರಗಳನ್ನು ಬಳಸಿಕೊಂಡು ಉದ್ಯೋಗ ಪಡೆಯಲು, ಸರ್ಕಾರಿ ಸೇವೆಗಳಿಗೆ ಸೇರಲು ಅಥವಾ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಖಂಡಿತವಾಗಿಯೂ ಸಾಧ್ಯವಿಲ್ಲ" ಎಂದು ಯುಜಿಸಿ ಸ್ಪಷ್ಟಪಡಿಸಿದೆ.

ಯುಜಿಸಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ದೆಹಲಿಯ 12 ನಕಲಿ ಸಂಸ್ಥೆಗಳ ಹೆಸರುಗಳಿವೆ. ಕಮರ್ಷಿಯಲ್ ವಿಶ್ವವಿದ್ಯಾಲಯ (ದರಿಯಾಗಂಜ್), ಯುನೈಟೆಡ್ ನೇಷನ್ಸ್ ವಿಶ್ವವಿದ್ಯಾಲಯ, ವೊಕೇಶನಲ್ ವಿಶ್ವವಿದ್ಯಾಲಯ, ಎಡಿಆರ್-ಸೆಂಟ್ರಿಕ್ ಜ್ಯೂರಿಡಿಕಲ್ ವಿಶ್ವವಿದ್ಯಾಲಯ (ರಾಜೇಂದ್ರ ಪ್ಲೇಸ್), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ವಿಶ್ವಕರ್ಮ ಓಪನ್ ಯೂನಿವರ್ಸಿಟಿ ಫಾರ್ ಸೆಲ್ಫ್ ಎಂಪ್ಲಾಯ್ಮೆಂಟ್, ಆಧ್ಯಾತ್ಮಿಕ ವಿಶ್ವವಿದ್ಯಾಲಯ (ರೋಹಿಣಿ), ವರ್ಲ್ಡ್ ಪೀಸ್ ಆಫ್ ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ (ಪೀತಾಂಪುರ) ಮತ್ತು ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಇಂಜಿನಿಯರಿಂಗ್ ಇವು ದೆಹಲಿಯಲ್ಲಿರುವ ಪ್ರಮುಖ ನಕಲಿ ಸಂಸ್ಥೆಗಳಾಗಿವೆ. ಉತ್ತರ ಪ್ರದೇಶದಲ್ಲಿ ಗಾಂಧಿ ಹಿಂದಿ ವಿದ್ಯಾಪೀಠ (ಪ್ರಯಾಗ್‌), ನೇತಾಜಿ ಸುಭಾಷ್ ಚಂದ್ರ ಬೋಸ್ ಓಪನ್ ವಿಶ್ವವಿದ್ಯಾಲಯ (ಅಲಿಗಢ್), ಭಾರತೀಯ ಶಿಕ್ಷಣ ಪರಿಷತ್ (ಲಕ್ನೋ) ಹಾಗೂ ಮಹಾಮಾಯಾ ತಾಂತ್ರಿಕ ವಿಶ್ವವಿದ್ಯಾಲಯ (ನೋಯ್ಡಾ) ನಕಲಿ ಎಂದು ಗುರುತಿಸಲ್ಪಟ್ಟಿವೆ.

Category
ಕರಾವಳಿ ತರಂಗಿಣಿ