image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೇಶವನ್ನು ಮುನ್ನಡೆಸುವ ವಿಷಯದಲ್ಲಿ ಇದುವರೆಗೂ ನಾನು ಮಾಡಿದ ಕೆಲಸಗಳು ನನಗೆ ತೃಪ್ತಿ ಮಾಡಿಲ್ಲ. ನನಗೆ ತೃಪ್ತಿ ಎಂಬುದೇ ಇಲ್ಲ : ಪ್ರಧಾನಿ ಮೋದಿ

ದೇಶವನ್ನು ಮುನ್ನಡೆಸುವ ವಿಷಯದಲ್ಲಿ ಇದುವರೆಗೂ ನಾನು ಮಾಡಿದ ಕೆಲಸಗಳು ನನಗೆ ತೃಪ್ತಿ ಮಾಡಿಲ್ಲ. ನನಗೆ ತೃಪ್ತಿ ಎಂಬುದೇ ಇಲ್ಲ : ಪ್ರಧಾನಿ ಮೋದಿ

ನವದೆಹಲಿ: 'ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಯಾವುದೇ ಜನಪ್ರಿಯ ಘೋಷಣೆಗಳನ್ನು ಮಾಡಲಿಲ್ಲ. ಬದಲಿಗೆ ನಮ್ಮ ಗಮನ ಉದ್ಯೋಗ ಸೃಷ್ಟಿ ಮತ್ತು ಸುಸ್ಥಿರ ಬೆಳವಣಿಗೆಗೆ ಮೂಲಸೌಕರ್ಯ ಅಭಿವೃದ್ಧಿಯತ್ತ ಕೇಂದ್ರೀಕೃತವಾಗಿತ್ತು. ಇದು ಅಭಿವೃದ್ಧಿ ಹೊಂದಿದ ದೇಶ ನಿರ್ಮಾಣದ ಬುನಾದಿಯಾಗಿದೆ. ಇದು ನಮ್ಮ ಆಡಳಿತ ಶೈಲಿ ಮತ್ತು ಆದ್ಯತೆಗಳ ಪ್ರತೀಕ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಸುದ್ದಿಸಂಸ್ಥೆಯೊಂದಕ್ಕೆ ವಿಶೇಷ ಸಂದರ್ಶನ ನೀಡಿರುವ ಪ್ರಧಾನಿ ಅದರಲ್ಲಿ, ಇತ್ತೀಚಿಗೆ ಮಂಡಿಸಿದ ಬಜೆಟ್‌ನ ಉದ್ದೇಶ ಮತ್ತು ಗುರಿಯ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಇದರ ಜೊತೆಗೆ ಅಮೆರಿಕ ಸೇರಿ ವಿವಿಧ ದೇಶಗಳ ಜೊತೆ ಮಾಡಿಕೊಂಡ ವ್ಯಾಪಾರ ಒಪ್ಪಂದ, ಈ ಹಿಂದೆ ಇಂಥ ಒಪ್ಪಂದ ಆಗದ್ದಕ್ಕೆ ಯುಪಿಎ ಸರ್ಕಾರದ ವೈಫಲ್ಯ, ದೇಶದ ರಕ್ಷಣಾ ವಲಯದ ಸುಧಾರಣೆ, ವಿಕಸಿತ ಭಾರತ ನಿರ್ಮಾಣದಲ್ಲಿ ಖಾಸಗಿ ವಲಯ ಮತ್ತು ಮಹಿಳೆಯರ ಪಾತ್ರ ಮೊದಲಾದ ವಿಷಯಗಳ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ. ಅಲ್ಲದೆ, 'ದೇಶವನ್ನು ಮುನ್ನಡೆಸುವ ವಿಷಯದಲ್ಲಿ ಇದುವರೆಗೂ ನಾನು ಮಾಡಿದ ಕೆಲಸಗಳು ನನಗೆ ತೃಪ್ತಿ ಮಾಡಿಲ್ಲ. ನನಗೆ ತೃಪ್ತಿ ಎಂಬುದೇ ಇಲ್ಲ' ಎಂದಿದ್ದಾರೆ.

'2026ರ ಬಜೆಟ್‌ ಈಗಿಲ್ಲದಿದ್ದರೆ ಇನ್ನೆಂದಿಗೂ ಇಲ್ಲ ಎಂಬಂತೆ ಆಕರ್ಷಕವಾಗಿ ಇರಲಿಲ್ಲ. ಬದಲಿಗೆ, 2047ರ ಹೊತ್ತಿಗೆ ವಿಕಸಿತ ಭಾರತವಾಗಲು ಸಿದ್ಧ ಎಂಬುದನ್ನು ತೋರಿಸುತ್ತದೆ. ಬಂಡವಾಳ ವೆಚ್ಚವು ನಮ್ಮ ಸರ್ಕಾರದ ವಿಶೇಷತೆಯಾಗಿದೆ. ಇದು, ಉತ್ಪಾದಕತೆ, ಉದ್ಯೋಗ ಮತ್ತು ಭವಿಷ್ಯದ ಆರ್ಥಿಕ ಸಾಮರ್ಥ್ಯವನ್ನು ಸೃಷ್ಟಿಸುವ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಪ್ರಜ್ಞಾಪೂರ್ವಕ ಕಾರ್ಯತಂತ್ರದ ಆಯ್ಕೆಯನ್ನು ಪ್ರತಿಬಿಂಬಿಸುತ್ತದೆ. ಜನರ ಜೀವನ ಮಟ್ಟ ಸುಧಾರಣೆ, ಯುವಕರಿಗಾಗಿ ಉದ್ಯೋಗ ಸೃಷ್ಟಿ ನಮ್ಮ ಪ್ರಮುಖ ಗುರಿ' ಎಂದರು. ಜತೆಗೆ, 'ಈ ಬಜೆಟ್‌ನಲ್ಲಿ 2014ರಿಂದ ಗಳಿಸಿದ ಲಾಭಗಳನ್ನು ಕ್ರೋಡೀಕರಿಸಿ, ಅದರ ಆಧಾರದಲ್ಲಿ ಮುಂದಿನ ಕಾಲು ಶತಮಾನಕ್ಕೆ ವೇಗವನ್ನು ನೀಡುವ ಉದ್ದೇಶದಿಂದ ಸಿದ್ಧಪಡಿಸಲಾಗಿದೆ' ಎಂದು ಹೇಳಿದರು. ಮೂಲಸೌಕರ್ಯಗಳ ಬಗ್ಗೆ ವಿವರಿಸುತ್ತಾ, 'ಇಷ್ಟು ಕಾಲ ಅವುಗಳ ಗುಣಮಟ್ಟವನ್ನು ಕಡೆಗಣಿಸಲಾಗಿತ್ತು. ಆದರೆ ನಾವೀಗ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡುತ್ತಾ, ಮುಂದಿನ ಪೀಳಿಗೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದೇವೆ. ಹೈ-ಸ್ಪೀಡ್‌ ಸಂಪರ್ಕ, ಸರಕು ಸಾಗಣೆ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಆದ್ಯತೆಯಾಗಿಟ್ಟುಕೊಂಡು ರೈಲ್ವೆ ಇಲಾಖೆಗೆ 3 ಲಕ್ಷ ಕೋಟಿ ರು. ಮೀಸಲಿಡಲಾಗಿದೆ. ಕರ್ನಾಟಕದ ಸೇರಿ ಇತರೆ ರಾಜ್ಯಗಳಿಗೆ ಉಪಯುಕ್ತವಾಗುವಂತೆ 7 ಹೈಸ್ಪೀಡ್‌ ರೈಲು ಕಾರಿಡಾರ್‌ಗಳನ್ನು ನಿರ್ಮಿಸಲಾಗುವುದು. ಕಳೆದ ದಶಕಕ್ಕೆ ಹೋಲಿಸಿದರೆ, ರಾಷ್ಟ್ರೀಯ ಹೆದ್ದಾರಿಗಳಿಗಾಗಿ ಎತ್ತಿಡಲಾಗಿರುವ ಮೊತ್ತದಲ್ಲಿ ಶೇ.500ರಷ್ಟು ಏರಿಕೆಯಾಗಿದೆ' ಎಂದು ಮೋದಿ ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಕೈಗೊಂಡ ಸುಧಾರಣಾ ಕ್ರಮಗಳು ಜನರ ಜೀವನ ಗುಣಮಟ್ಟ ಸುಧಾರಿಸುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿವೆ ಎಂದಿರುವ ಪ್ರಧಾನಿ ಮೋದಿ, ರಚನಾತ್ಮಕ ಸುಧಾರಣೆ, ಇನ್ನಷ್ಟು ಆಳವಾದ ನಾವೀನ್ಯತೆ ಮತ್ತು ಮತ್ತು ಆಡಳಿತವನ್ನು ಮತ್ತಷ್ಟು ಸರಳಗೊಳಿಸುವುದು ಮುಂದಿನ ದಶಕದಲ್ಲಿ ಸರ್ಕಾರದ ಆದ್ಯತೆಯಾಗಿರಲಿದೆ ಎಂದರು. ತಮ್ಮ ಕಾರ್ಯವೈಖರಿಯ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, 'ನಾನು ಎಂದೂ ಸಂಪೂರ್ಣ ತೃಪ್ತನಾಗುವುದೇ ಇಲ್ಲ. ಇನ್ನೂ ಹೆಚ್ಚು ಸಾಧಿಸುವ ಮತ್ತು ದೇಶವನ್ನು ಮುನ್ನಡೆಸುವ ತೀವ್ರ ಬಯಕೆ ನನ್ನಲ್ಲಿದೆ. ಈ ನಿಟ್ಟಿನಲ್ಲಿ ಇಷ್ಟು ಕಾಲ ಕೆಲಸ ಮಾಡಿರುವೆನಾದರೂ ನನಗೆ ಅದರಿಂದ ಪೂರ್ಣ ತೃಪ್ತಿ ದೊರಕಿಲ್ಲ. ಕಾರಣ, ಸಾಮಾಜಿಕ ಜೀವನದಲ್ಲಿರುವಾಗ ರಚನಾತ್ಮಕವಾದ ತುಡಿತ, ಹೆಚ್ಚನ್ನು ಸಾಧಿಸುವ ಬಯಕೆ, ವೇಗವಾದ ಸುಧಾರಣೆ ಮತ್ತು ಉತ್ತಮವಾದ ಸೇವೆ ಸಲ್ಲಿಸುವುದು ಅತ್ಯಗತ್ಯ' ಎಂದು ಹೇಳಿದರು.

Category
ಕರಾವಳಿ ತರಂಗಿಣಿ