image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ - ಹಿಂದೂ ಮುಖಂಡರ ನೇತೃತ್ವದಲ್ಲಿ ಧರ್ಮಾಗ್ರಹ ಸಭೆ

ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ - ಹಿಂದೂ ಮುಖಂಡರ ನೇತೃತ್ವದಲ್ಲಿ ಧರ್ಮಾಗ್ರಹ ಸಭೆ

ಮಂಗಳೂರು: ತಿರುಪತಿ ಲಡ್ಡು ಪ್ರಸಾದ ಅಪವಿತ್ರತೆಯ ಹಿನ್ನಲೆಯಲ್ಲಿ ವಿಶ್ವ ಹಿಂದೂ ಪರಿಷತ್  ನಗರದ ಡೊಂಗರಕೇರಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸ್ವಾಮೀಜಿಗಳು ಮತ್ತು ಹಿಂದೂ ಮುಖಂಡರ ನೇತೃತ್ವದಲ್ಲಿ ಧರ್ಮಾಗ್ರಹ ಸಭೆ ನಡೆಸಿತು.

ಈ ವೇಳೆ ಹಲವು ನಿರ್ಣಯಗಳನ್ನು ತೆಗದುಕೊಳ್ಳಲಾಯಿತು. ಮೊದಲನೆಯದಾಗಿ ತಿರುಪತಿಯ ಲಡ್ಡು ಅಪವಿತ್ರತೆಯಲ್ಲಿ ಯಾರು ಕಾರಣರಾಗಿದ್ದಾರೋ ಮತ್ತು ಕರ್ತವ್ಯ ಲೋಪ ಎಸಗಿದ್ದಾರೋ ಅವರ ಬಗ್ಗೆ ಸಿಬಿಐ ತನಿಖೆ ನಡೆಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡುರವರನ್ನು ಸಭೆ ಒತ್ತಾಯಿಸಿದೆ. ಇನ್ನು ಮುಂದೆ ಯಾವುದೇ ದೇವಸ್ಥಾನದಲ್ಲಿ ಇಂತಹ ಕೃತ್ಯ ಆಗಬಾರದೆಂದು ಸಭೆ ಒಕ್ಕೊರಲಿನಿಂದ ಒತ್ತಾಯಿಸಿತು.

ದೇವಸ್ಥಾನಕ್ಕೆ ಅವಶ್ಯವಿರುವ ತುಪ್ಪವನ್ನು ದೇವಸ್ಥಾನದ ಟ್ರಸ್ಟ್‌ ವತಿಯಿಂದಲೇ ತಯಾರು ಮಾಡಲು ಅನುಕೂಲವಾಗುವಂತೆ 25,000 ದೇಸಿ ಹಸುಗಳಿರುವ ಬೃಹತ್‌ ಗೋಶಾಲೆಯನ್ನು ಪ್ರಾರಂಭಿಸಲು ತಿರುಮಲ ತಿರುಪತಿ ದೇವಸ್ಥಾನದವರನ್ನು ಸಭೆ ಒತ್ತಾಯಿಸಿತು. ದೇಶದ ಇತರ ದೇವಸ್ಥಾನಗಳಲ್ಲಿಯೂ ದೇವರ ವಿನಿಯೋಗಕ್ಕೆ ಅವಶ್ಯಕತೆ ಇರುವ ತುಪ್ಪಕ್ಕೆ ಬೇಕಾದ ಗೋವುಗಳನ್ನು ಆಯಾ ದೇವಸ್ಥಾನದವರು ಸಾಕಬೇಕೆಂದು ಒತ್ತಾಯಿಸಲಾಯಿತು.

ದೇಶದ ಎಲ್ಲಾ ದೇವಸ್ಥಾನಗಳನ್ನು  ಸರಕಾರದ ಹಿಡಿತದಿಂದ ಮುಕ್ತಿಗೊಳಿಸಿ ಸರ್ವ ಸಮ್ಮತ ರೀತಿಯಲ್ಲಿ ಹಿಂದೂ ಸಮಾಜಕ್ಕೆ ಹಸ್ತಾಂತರಿಸಬೇಕು. ಅದಕ್ಕಾಗಿ ರಾಷ್ಟ್ರೀಯ ಧಾರ್ಮಿಕ ಪರಿಷತ್ತು ಮತ್ತು ರಾಜ್ಯ ಧಾರ್ಮಿಕ ಪರಿಷತ್ತನ್ನು ಸ್ಥಾಪಿಸಬೇಕೆಂದು ಈ ಸಭೆಯಲ್ಲಿ ನಿರ್ಣಯಿಸಲಾಯಿತು.

ದೀಪಕ್ಕೆ ಹಾಕುವ ಎಳ್ಳೆಣ್ಣೆ, ದೀಪದ ಎಣ್ಣೆ, ತೆಂಗಿನ ಎಣ್ಣೆಗಳು ಸಾಕಷ್ಟು ಕಲಬೆರಕೆಯಿಂದ ಕಂಡುಬರುತ್ತಿದ್ದು, ಎಲ್ಲಾ ದೇವಸ್ಥಾನಗಳಲ್ಲಿ ಪರಿಶುದ್ಧ ಎಣ್ಣೆ ತುಪ್ಪಗಳಿಂದ ದೀಪವನ್ನು ಹಚ್ಚಬೇಕೆಂದು ಈ ಸಭೆ ಎಲ್ಲಾ ದೇವಸ್ಥಾನದವರನ್ನು ವಿನಂತಿಸಲಾಯಿತು.

ಈ ಸಭೆಯಲ್ಲಿ ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಓಂ ಶ್ರೀ ಮಠ ಗುರುನಗರ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಓಂ ಶ್ರೀ ಮಠ ಗುರುನಗರ ಶ್ರೀ ಶಿವ ಜ್ಞಾನಮಹಿ ಸರಸ್ವತಿ, ಕನ್ಯಾನ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಸೇರಿದಂತೆ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ವಿಹಿಂಪ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಮೊದಲಾದ ಹಿಂದೂ ಮುಖಂಡರು  ಪಾಲ್ಗೊಂಡಿದ್ದರು.

Category
ಕರಾವಳಿ ತರಂಗಿಣಿ