image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಷ್ಯಾದ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ S-350 ವಿತ್ಯಾಜ್ ಭಾರತಕ್ಕೆ!

ರಷ್ಯಾದ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ S-350 ವಿತ್ಯಾಜ್ ಭಾರತಕ್ಕೆ!

ನವದೆಹಲಿ : ಭಾರತದ ವಾಯು ಗಡಿಯನ್ನು ಮತ್ತಷ್ಟು ಭೇದ್ಯವಾಗಿಸಲು ರಷ್ಯಾ ಈಗ S-350 ವಿತ್ಯಾಜ್ ಎಂಬ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯನ್ನು ಭಾರತಕ್ಕೆ ನೀಡಲು ಮುಂದಾಗಿದೆ. ವಿಶೇಷವೆಂದರೆ, ಈ ವ್ಯವಸ್ಥೆಯು ತಂತ್ರಜ್ಞಾನ ವರ್ಗಾವಣೆ (ToT) ಅಡಿಯಲ್ಲಿ ಲಭ್ಯವಿದ್ದು, ಇದರ ಕೆಲವು ಪ್ರಮುಖ ಭಾಗಗಳನ್ನು ಭಾರತದಲ್ಲೇ ತಯಾರಿಸಲು ಅವಕಾಶ ಸಿಗಲಿದೆ. ಈಗಾಗಲೇ ಭಾರತದ ಬಳಿ ಇರುವ S-400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆಯೊಂದಿಗೆ ಈ S-350 ಅನ್ನು ಸಂಯೋಜಿಸುವುದರಿಂದ, ದೇಶದ ಒಟ್ಟಾರೆ ರಕ್ಷಣಾ ಸಾಮರ್ಥ್ಯ ದುಪ್ಪಟ್ಟಾಗಲಿದೆ ಎಂದು ರಷ್ಯಾದ ರಕ್ಷಣಾ ಸಂಸ್ಥೆ 'ರೋಸ್ಟೆಕ್' ತಿಳಿಸಿದೆ. ಇತ್ತೀಚೆಗೆ ನಡೆದ ಉನ್ನತ ಮಟ್ಟದ ರಾಜತಾಂತ್ರಿಕ ಸಭೆಗಳಲ್ಲಿ S-350 ವ್ಯವಸ್ಥೆಯ ಬಗ್ಗೆ ಗಂಭೀರ ಚರ್ಚೆಗಳು ನಡೆದಿವೆ. ಇದರೊಂದಿಗೆ ಹೆಚ್ಚುವರಿ S-400 ರೆಜಿಮೆಂಟ್‌ಗಳು ಮತ್ತು ಭವಿಷ್ಯದ ಅತಿ ಶಕ್ತಿಶಾಲಿ S-500 ವ್ಯವಸ್ಥೆಯನ್ನು ಭಾರತಕ್ಕೆ ತರುವ ಬಗ್ಗೆಯೂ ಮಾತುಕತೆ ಸಾಗಿದೆ. ಸದ್ಯಕ್ಕೆ ರಷ್ಯಾವು S-350 ಅನ್ನು ಅತ್ಯಂತ ಪರಿಣಾಮಕಾರಿ ಮತ್ತು ಶೀಘ್ರವಾಗಿ ಲಭ್ಯವಾಗುವ ಆಯ್ಕೆಯಾಗಿ ಭಾರತದ ಮುಂದೆ ಇಟ್ಟಿದೆ. ಭಾರತ ಈಗಾಗಲೇ ಮೂರು S-400 ಸ್ಕ್ವಾಡ್ರನ್‌ಗಳನ್ನು ಗಡಿಯಲ್ಲಿ ನಿಯೋಜಿಸಿದ್ದು, ಶೀಘ್ರದಲ್ಲೇ ಉಳಿದ ಎರಡು ಸ್ಕ್ವಾಡ್ರನ್‌ಗಳು ಸೇರ್ಪಡೆಯಾಗಲಿವೆ.

S-350 ವಿತ್ಯಾಜ್ (S-350E) ಎಂಬುದು ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ಗಾಳಿಗೆ ಹಾರುವ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯಾಗಿದೆ. ಹಳೆಯದಾದ S-300PS ವ್ಯವಸ್ಥೆಯನ್ನು ಬದಲಿಸಲು ಇದನ್ನು ವಿನ್ಯಾಸಗೊಳಿಸಲಾಗಿದ್ದು, ಇದು ಶತ್ರುಗಳ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು, ಡ್ರೋನ್‌ಗಳು ಮತ್ತು ಅತ್ಯಂತ ವೇಗವಾಗಿ ಬರುವ ಕ್ರೂಸ್ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಇದರ ಸುಧಾರಿತ ತಂತ್ರಜ್ಞಾನವು ರಹಸ್ಯವಾಗಿ ಬರುವ ಗುರಿಗಳನ್ನು ಕೂಡ ಪತ್ತೆಹಚ್ಚಬಲ್ಲದು. ಈ ರಕ್ಷಣಾ ವ್ಯವಸ್ಥೆಯು 120 ಕಿಲೋಮೀಟರ್ ದೂರದವರೆಗಿನ ವಿಮಾನಗಳನ್ನು ಮತ್ತು 25-30 ಕಿಲೋಮೀಟರ್ ದೂರದವರೆಗಿನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲದು. ಇದು ಭೂಮಿಯಿಂದ ಸುಮಾರು 30 ಕಿಲೋಮೀಟರ್ ಎತ್ತರದವರೆಗೆ ಕಾರ್ಯಾಚರಣೆ ನಡೆಸುವ ಕ್ಷಮತೆ ಹೊಂದಿದೆ. ಈ ವ್ಯವಸ್ಥೆಯಲ್ಲಿ 9M96E ನಂತಹ ವಿವಿಧ ಶ್ರೇಣಿಯ ಕ್ಷಿಪಣಿಗಳಿದ್ದು, ಒಂದೇ ಲಾಂಚರ್‌ನಲ್ಲಿ 12 ಕ್ಷಿಪಣಿಗಳನ್ನು ಇರಿಸಬಹುದು. ಇದರ ಅತ್ಯಾಧುನಿಕ AESA ರಾಡಾರ್, ಕೆಳಮಟ್ಟದಲ್ಲಿ ಹಾರುವ ಅಪಾಯಕಾರಿ ಗುರಿಗಳನ್ನು ತಕ್ಷಣವೇ ಗುರುತಿಸುತ್ತದೆ. ಭಾರತದ ಬಳಿ ಈಗಾಗಲೇ ಇರುವ ಆಕಾಶ್, ಬರಾಕ್-8 ಮತ್ತು S-400 ವ್ಯವಸ್ಥೆಗಳೊಂದಿಗೆ S-350 ಸೇರ್ಪಡೆಯಾದರೆ, ಭಾರತವು 'ಮಲ್ಟಿ-ಲೇಯರ್' (ಬಹು-ಪದರದ) ವಾಯು ರಕ್ಷಣಾ ಕವಚವನ್ನು ಹೊಂದಲಿದೆ. ಇದು ಭಾರತೀಯ ವಾಯುಪಡೆಗೆ ಯುದ್ಧದ ಸಮಯದಲ್ಲಿ ಹೆಚ್ಚಿನ ಸ್ವಾತಂತ್ರ್ಯ ನೀಡುತ್ತದೆ. ಈ ಒಪ್ಪಂದವು ಅಂತಿಮಗೊಂಡರೆ, 'ಮೇಕ್ ಇನ್ ಇಂಡಿಯಾ' ಯೋಜನೆಯಡಿ ಭಾರತದಲ್ಲೇ ಇದರ ಉತ್ಪಾದನೆ ಮತ್ತು ನಿರ್ವಹಣೆ ನಡೆಯುವುದರಿಂದ ಸ್ಥಳೀಯ ರಕ್ಷಣಾ ಉದ್ಯಮಕ್ಕೆ ದೊಡ್ಡ ಮಟ್ಟದ ಉತ್ತೇಜನ ಸಿಗಲಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

Category
ಕರಾವಳಿ ತರಂಗಿಣಿ