image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಂಸದ ಕ್ಯಾ. ಚೌಟ ಅವರ ಬ್ಯಾಕ್‌ ಟು ಊರು ಪರಿಕಲ್ಪನೆಗೆ ಬಿ.ವೈ. ವಿಜಯೇಂದ್ರ ಮೆಚ್ಚುಗೆ

ಸಂಸದ ಕ್ಯಾ. ಚೌಟ ಅವರ ಬ್ಯಾಕ್‌ ಟು ಊರು ಪರಿಕಲ್ಪನೆಗೆ ಬಿ.ವೈ. ವಿಜಯೇಂದ್ರ ಮೆಚ್ಚುಗೆ

ಮಂಗಳೂರು: ಗ್ರಾಮೀಣ ಸೊಗಡಿನ ಕಂಬಳವನ್ನು ನಗರಕ್ಕೆ ಪರಿಚಯಿಸಿದಂತೆ, ಜಗತ್ತಿನಾದ್ಯಂತ ಹರಡಿರುವ ಮಂಗಳೂರಿನ ಪ್ರತಿಭೆಗಳು ತಾಯ್ನಾಡಿಗೆ ಕೊಡುಗೆ ನೀಡಲು ಇಲ್ಲಿ ಉದ್ಯಮ ಸ್ಥಾಪಿಸುವಂತೆ ಹುರಿದುಂಬಿಸುವ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ 'ಬ್ಯಾಕ್ ಟು ಊರು' ಪರಿಕಲ್ಪನೆ ಅತ್ಯಂತ ವಿಭಿನ್ನ ಹಾಗೂ ಶ್ಲಾಘನೀಯವಾದುದು ಎಂದು  ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಹೇಳಿದ್ದಾರೆ.

ಬಂಗ್ರಕೂಳೂರಿನ ಗೋಲ್ಡ್‌ಪಿಂಚ್‌ ಸಿಟಿಯ ರಾಮ-ಲಕ್ಷ್ಮಣ ಜೋಡುಕರೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ನೇತೃತ್ವದಲ್ಲಿ ನಡೆದ ನವ ವರ್ಷದ ನವವಿಧದ 9ನೇ ವರ್ಷದ ಕಂಬಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಂಬಳ ಎನ್ನುವುದು ಕೇವಲ ಗ್ರಾಮೀಣ ಒಂದು ಜಾನಪದ ಕ್ರೀಡೆಯಲ್ಲ. ಈ ಕಂಬಳವು ತುಳುನಾಡಿನ ಅಸ್ಮಿತೆಯ ಪ್ರತೀಕ. ಇಂಥಹ ಕಂಬಳ ವೇದಿಕೆಯಲ್ಲಿ ಕ್ಯಾ. ಚೌಟ ಅವರು ತಮ್ಮ ಬ್ಯಾಕ್‌ ಟು ಊರು ಪರಿಕಲ್ಪನೆಯಡಿ ತಾಯ್ನಾಡಿಗೆ ವಾಪಸ್ಸಾಗಿ ಈ ತುಳುನಾಡಿಗೆ ಕೊಡುಗೆ ನೀಡುತ್ತಿರುವ ಕರಾವಳಿ ಭಾಗದ ಯಶಸ್ವಿ ಉದ್ಯಮಿಗಳನ್ನು ಗುರುತಿಸಿ ಅಂಥಹ ಸಾಧಕರನ್ನು ಗೌರವಿಸುತ್ತಿರುವುದು ಕೂಡ ಪ್ರಶಂಸನೀಯ ಹಾಗೂ ಮಾದರಿಯ ನಡೆ ಎಂದು ಅವರು ಹೇಳಿದ್ದಾರೆ.   

ಕ್ಯಾ. ಬ್ರಿಜೇಶ್‌ ಚೌಟ ಅವರು ಕಳೆದ 8 ವರ್ಷಗಳಿಂದ ಮಂಗಳೂರು ಕಂಬಳವನ್ನು ಬಹಳ ವ್ಯವಸ್ಥಿತವಾಗಿ ಆಯೋಜಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಚಾರ. ಗ್ರಾಮೀಣ ಭಾಗದ ಜನರಂತೆ ಪ್ರಸ್ತುತ ನಗರ ಭಾಗದಲ್ಲಿಯೂ ಕಂಬಳದ ಸದ್ದು ಮೊಳಗುತ್ತಿದ್ದರೆ ಅದಕ್ಕೆ ಕ್ಯಾ. ಬ್ರಿಜೇಶ್‌ ಚೌಟ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಮಂಗಳೂರು ಕಂಬಳದ ಕೊಡುಗೆ ಗಮನಾರ್ಹವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ಕಂಬಳ ಸಮಿತಿಯ ಅಧ್ಯಕ್ಷರು ಹಾಗೂ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಮಾತನಾಡಿ, ತುಳುನಾಡಿನ ಕಲೆ ಹಾಗೂ ಸಾಂಸ್ಕೃತಿಕ ಅಸ್ಮಿತೆಯನ್ನು ಮುಂದಿನ ಜನಾಂಗಕ್ಕೂ ಪರಿಚಯಿಸಲು ಈ ಕಂಬಳವನ್ನು ನಡೆಸಲಾಗುತ್ತಿದೆ. ಈ ಬಾರಿ ರಾಷ್ಟ್ರ ಜಾಗೃತಿಯ ಕಾರ್ಯಕ್ರಮ, ಬ್ಯಾಕ್‌ ಟು ಊರು ಸೇರಿದಂತೆ ನವ-ವಿಧ ಕಾರ್ಯಕ್ರಮಗಳ ಮೂಲಕ ಮಂಗಳೂರು ಕಂಬಳವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸುವ ಪ್ರಯತ್ನ ಮಾಡಿರುವುದಾಗಿ ಹೇಳಿದರು.

ದೇಶ-ವಿದೇಶದಲ್ಲಿ ಉದ್ಯಮ ಅಥವಾ ಉದ್ಯೋಗದಲ್ಲಿ ಉನ್ನತ ಹುದ್ದೆಯಲ್ಲಿ ನೆಲೆಸಿದ್ದವರು ವಾಪಾಸ್‌ ತಾಯ್ನಾಡಿಗೆ ಬಂದು ಸ್ವಂತ ಉದ್ಯಮ ಕಟ್ಟಿ ಬೆಳೆಸಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಿರುವ ಯಶಸ್ವಿ 10 ಉದ್ಯಮಿಗಳನ್ನು ಗುರುತಿಸಿ ಗೌರವಿಸಿರುವುದು ಬ್ಯಾಕ್‌ ಟು ಊರಿಗೆ ಮತ್ತಷ್ಟು ಮಂಗಳೂರಿಗರು ಹಿಂದಿರುಗಲು ಪ್ರೇರಣೆ ನೀಡಿರುವುದು ಈ ಬಾರಿಯ ಮಂಗಳೂರು ಕಂಬಳದ ಬಹಳ ವಿಶೇಷತೆಯಾಗಿದೆ.

ಅದರಂತೆ ಮಂಗಳೂರಿನಲ್ಲಿ ಇಜಿ ಕಂಪೆನಿಯ ಆಪರೇಷನ್‌ ಆರಂಭಿಸಿ ಸಾಕಷ್ಟು ಉದ್ಯೋಗಾವಕಾಶ ನೀಡಿರುವ ಆನಂದ್‌ ಫೆರ್ನಾಂಡೀಸ್‌, ಮಂಗಳೂರಿನ ಎಸ್‌ಇಝೆಡ್‌ನಲ್ಲಿ ಸುಸ್ಥಿರ ಕಟ್ಟಡ ಸಾಮಗ್ರಿಗಳ ಘಟಕ ಸ್ಥಾಪಿಸಿರುವ ಎಂಐಆರ್‌ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ನಿತಿನ್‌ ರತ್ನಾಕರ್‌, ಮಂಗಳೂರಿನ ಎಸ್‌ಇಝೆಡ್‌ನಲ್ಲಿ ಇಟ್ಯಾಗ್‌ ಎನರ್ಜಿಟೆಕ್ನಿಕ್‌ ಪ್ರೈವೆಟ್‌ ಲಿ.ನ ಉತ್ಪಾದನಾ ಘಟನೆ ಸ್ಥಾಪಿಸುತ್ತಿರುವ ಬ್ರೂನೋ ಮಾರ್ಸೆಲ್‌ ಪ್ರಕಾಶ್‌ ಪೆರೇರಾ, ಶೆಫ್‌ ಹಾಗೂ ಉದ್ಯಮಿಯಾಗಿರುವ ಶ್ರೀಯಾ ಶೆಟ್ಟಿ, ಅಗ್ರಿಲೀಫ್‌ ಮೂಲಕ ಗ್ರಾಮೀಣ ಭಾಗದಲ್ಲಿ ಸುಸ್ಥಿರ ಉತ್ಪಾದನಾ ಕಂಪೆನಿ ಸ್ಥಾಪಿಸಿರುವ ಅವಿನಾಶ್‌ ರಾವ್‌, ಇಂಡಸ್ಟ್ರೀಯಲ್‌ ಅಟೋಮೇಷನ್‌ & ಡಿಜಿಟಲ್‌ ಟೆಕ್ನಾಲಜೀಸ್‌ ಮೂಲಕ ಮಂಗಳೂರಿಗೆ ಕೊಡುಗೆ ನೀಡಿರುವ ಸ್ಮಿತಾ ರಾವ್‌, ಬೋಸ್ ಫ್ರೊಫೆಷನಲ್ಸ್‌ನ ಇಂಡಿಯಾ ಆರ್‌ಅಂಡ್‌ಡಿ ಸೆಂಟರ್‌ನ್ನು ಮಂಗಳೂರಿನಲ್ಲಿ ಸ್ಥಾಪಿಸಿರುವ ನಮಿತಾ ಪಿ.ಪಿ., ಹೈದರಬಾದ್‌ನಿಂದ ಎಂಎನ್‌ಸಿ ಕಂಪೆನಿ ಕೆಲಸ ಬಿಟ್ಟುಬಂದು ಮಂಗಳೂರಿನಲ್ಲಿ ಡೀನೆಟ್‌ ಸರ್ವೀಸಸ್‌ ಪ್ರೈ.ಲಿ. ಮೂಲಕ ಇಂಟರ್‌ನೆಟ್‌ ಸೇವೆ ಒದಗಿಸಿ ನೂರಾರು ಮಂದಿಗೆ ಉದ್ಯೋಗ ನೀಡಿರುವ ಸಂದೇಶ್‌ ಡಿ. ಪೂಜಾರಿ, ಉದ್ಯಮಿಯಾಗಿ ಎಸ್‌ಎನ್‌ ಪೂಂಜಾ & ಕೋ. ಮೂಲಕ ಮಂಗಳೂರು ನಗರದಲ್ಲಿ ಕದ್ರಿ ಪಾರ್ಕ್‌ ಅಭಿವೃದ್ಧಿ ಸೇರಿ ವಿವಿಧ ವೆಂಚರ್‌ಗಳನ್ನು ಮಾಡಿರುವ ಸುಧಾಕರ್‌ ಪೂಂಜಾ, ಸೌದಿ ಅರೇಬಿಯಾ ಸೇರಿ ಹಲವೆಡೆ ಇಂಡಿಪೆಂಡೆಂಟ್‌ ಇನ್ನೋವೇಷನ್‌ ಎಂಬ ಕಂಪೆನಿ ಮೂಲಕ ತಮ್ಮ ಉದ್ಯಮವನ್ನು ಮಂಗಳೂರಿಗೆ ವಿಸ್ತರಿಸಿರುವ ಅನ್ಸಾರಿ ಅಲಿ ಅವರನ್ನು ಕಂಬಳ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಕಂಬಳಕ್ಕೆ ಮೆರುಗು ತಂದ ಮೇರಿ ಕೋಮ್‌

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ ಮೇರಿ ಕೋಮ್‌ ಅವರು ಮಂಗಳೂರು ಕಂಬಳದಲ್ಲಿ ಪಾಲ್ಗೊಂಡು ಕರಾವಳಿಯ ಈ ಜಾನಪದ ಕ್ರೀಡೆಯನ್ನು ಪ್ರೋತ್ಸಾಹಿಸಿದ್ದಾರೆ. ಈ ವೇಳೆ ಅವರಿಗೆ ಕಂಬಳದ ಬೆತ್ತ ಹಾಗೂ ಕಂಬಳ ಕೋಣಗಳ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಾನು ಇದೇ ಮೊದಲ ಬಾರಿಗೆ ನೇರವಾಗಿ ಕಂಬಳವನ್ನು ನೋಡುತ್ತಿದ್ದು, ಬಹಳ ಖುಷಿ ನೀಡಿದೆ. ನಿಜಕ್ಕೂ ಇದೊಂದು ಅಪರೂಪವಾದ ಕ್ರೀಡಾ ಸಂಭ್ರಮ ಎಂದು ಮಂಗಳೂರು ಕಂಬಳವನ್ನು ಬಣ್ಣಿಸಿದ್ದಾರೆ.   

ಕಂಬಳ ಸಮಿತಿಯ ಗೌರವಾಧ್ಯಕ್ಷ ಡಾ.ಕೆ. ಪ್ರಕಾಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹರೀಶ್‌ ಪೂಂಜಾ, ವೇದವ್ಯಾಸ ಕಾಮತ್‌, ಭಾಗೀರಥಿ ಮುರುಳ್ಯ,  ಡಾ.ವೈ. ಭರತ್‌ ಶೆಟ್ಟಿ, ರಾಜೇಶ್‌ ನಾೖಕ್‌, ಗುರುರಾಜ ಗಂಟಿಹೊಳೆ, ವಿಧಾನ ಪರಿಷತ್‌ ಸದಸ್ಯರಾದ ಪ್ರತಾಪ ಸಿಂಹ ನಾಯಕ್‌, ಕಿಶೋರ್‌ ಕುಮಾರ್‌ ಬೊಟ್ಯಾಡಿ, ಮಾಜಿ ಸಚಿವರಾದ ಪ್ರಮೋದ್‌ ಮಧ್ವರಾಜ್‌, ಬಿ.ನಾಗರಾಜ ಶೆಟ್ಟಿ, ಪ್ರಮುಖರಾದ ಶಶಿಧರ ಶೆಟ್ಟಿ ಬರೋಡಾ ಸೇರಿದಂತೆ ಹಲವು ಉದ್ಯಮಿಗಳು, ಗಣ್ಯರು, ಜನನಾಯಕರು ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ