ಮಂಗಳೂರು: ಕಾರಾಗೃಹ ವಿಭಾಗದ ನೂತನ ಡಿಜಿಪಿ ಅಲೋಕ್ ಕುಮಾರ್ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಂಗಳೂರು ಕಾರಾಗೃಹಕ್ಕೆ ಔಪಚಾರಿಕವಾಗಿ ಬಂದು ಭೇಟಿ ಕೊಟ್ಟಿದ್ದೇನೆ. ರಾಜ್ಯದಲ್ಲಿ 54 ಕಾರಾಗೃಹಗಳಿದೆ. ಎಲ್ಲಾ ಕಾರಾಗೃಹವನ್ನು ಸಮಯಕ್ಕೆ ಸರಿಯಾಗಿ ನೋಡಬೇಕು. ಮಂಗಳೂರಿನಲ್ಲಿ ಇರುವುದು ಸೂಕ್ಷ್ಮ ಕಾರಾಗೃಹ. ಈಗಾಗಲೇ ಇಲ್ಲಿ ರೈಡ್‌ಗಳನ್ನು ಮಾಡಲಾಗಿದೆ. ಒಳಗಡೆ ಗಲಾಟೆ ಮಾಡಿರುವ ಕೈದಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಇನ್ನೊಂದಿಷ್ಟು ಕೈದಿಗಳನ್ನು ಬೇರೆ ಜಾಗಕ್ಕೆ ಕಳುಹಿಸುತ್ತೇವೆ ಎಂದರು.
ಒಳ್ಳೆಯ ನಡತೆ ಹೊಂದಿರುವವರಿಗೆ ಸಹಕಾರ ಕೊಡ್ತೇವೆ. ಅದಕ್ಕಾಗಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇವೆ. ಯಾವ ರೀತಿ ನಿಷೇಧಿತ ವಸ್ತುಗಳು ಬರ್ತಿದೆ ಎಂದು ಚರ್ಚೆ ಮಾಡ್ತೇವೆ. ಟ್ರಯಲ್ ಬೇಸಿಸ್ ಮೇಲೆ ಎಐ ಟೆಕ್ನಾಲಜಿ ಬಳಕೆ ಮಾಡ್ತಿದ್ದೇವೆ. ಎಷ್ಟು ಪರಿಣಾಮಕಾರಿ ಆಗುತ್ತದೆ ಎಂದು ನೋಡಿ ಅಳವಡಿಕೆ ಮಾಡುತ್ತೇವೆ. ಪರಪ್ಪನ ಅಗ್ರಹಾರ, ಮೈಸೂರು ಜೈಲಿನಲ್ಲಿ ಟ್ರಯಲ್ ಆಗಿದೆ. ಮಂಗಳೂರು ಜೈಲಿನಲ್ಲಿಯೂ ಬೇಕಾದ್ರೆ ಟ್ರಯಲ್ ಮಾಡುತ್ತೇವೆ ಎಂದರು.
ಜಾಮರ್ ಸಮಸ್ಯೆಯ ಬಗ್ಗೆ ಕಳೆದ 15ವರ್ಷಗಳಿಂದ ಕೇಳುತ್ತಿದ್ದೇನೆ. ಕಾಲ ಕಾಲಕ್ಕೆ ಬದಲಾವಣೆ ಆಗಿದೆ. ಆದರೆ ಇನ್ನೂ ಕೆಲವು ಸಮಸ್ಯೆಗಳು ಇದೆ. ನಿನ್ನೆ ಒಂದು ಮೊಬೈಲ್ ಫೋನ್ ಮಂಗಳೂರು ಜೈಲಿನಲ್ಲಿ ಸಿಕ್ಕಿದೆ. ಮುಂದೆಯು ಪೊಲೀಸರು ಸಹ ಪರಿಶೀಲನೆ ಮಾಡುತ್ತಿರುತ್ತಾರೆ. ಜೈಲನ್ನು ಕಂಟ್ರೋಲ್ ಮಾಡಿದ್ರೆ 60% ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಬರುತ್ತದೆ ಎಂದರು.