ಮಂಗಳೂರು: ಸ್ಥಳೀಯಾಡಳಿತ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್‌ಗೆ ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಉಡುಪಿ ಜಿಲ್ಲೆಯ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉಡುಪಿಯ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರಾಜು ಪೂಜಾರಿ, ಭುಜಂಗ ಶೆಟ್ಟಿ ಹಾಗೂ ಪಕ್ಷದ ಮುಖಂಡ ಕಾರ್ಕಳದ ಟಿ ಆರ್ ರಾಜು ಸ್ಪರ್ಧಿಸಲು ಉತ್ಸಾಹ ತೋರಿದ್ದಾರೆ. ಈ ಮೂವರೊಂದಿಗೆ ಇನ್ನೂ ಮೂರು ಹೆಸರುಗಳು ಹೈಕಮಾಂಡ್ ಮುಂದಿದ್ದು, ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ. ಕಳೆದ ಬಾರಿ ನನಗೆ 2200 ರಷ್ಟು ಮತಗಳು ಬಂದಿದ್ದು ಕೋಟ ಶ್ರೀನಿವಾಸ ಪೂಜಾರಿ ಅವರಿಗೆ 3500 ರಷ್ಟು ಮತಗಳಿದ್ದು ಸಾವಿರದ 500 ರಷ್ಟು ಮತಗಳ ಅಂತರವಿದೆ ಈ ಮತಗಳನ್ನು ಕಾಂಗ್ರೆಸ್ ಪಕ್ಷ ಹೇಗೆ ತಿರುಗಿಸುವುದೆಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಮಗೆ ಮತಗಳ ಸಂಖ್ಯೆ ಕಡಿಮೆ ಇದೆ ಎಂದು ಈ ಚುನಾವಣೆಯನ್ನು ಲಘುವಾಗಿ ಪರಿಗಣಿಸುವುದಿಲ್ಲ.
ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹಲವು ಸಭೆಗಳನ್ನು ನಡೆಸಿದ್ದು ಇನ್ನು ಜಿಲ್ಲೆಯ ಮುಖಂಡರಲ್ಲಿ ಇನ್ನೊಂದು ಬಾರಿ ಸಭೆಯನ್ನು ನಡೆಸಿ ಸಮರ್ಥ ಅಭ್ಯರ್ಥಿಯನ್ನು ಆಯ್ಕೆಮಾಡುವ ಹೊಣೆಗಾರಿಕೆಯನ್ನು ಜಿಲ್ಲಾ ಮುಖಂಡರಿಗೆ ನೀಡುತ್ತಾರೆ. ಹಿಂದೊಮ್ಮೆ ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದರೂ ಬ್ಲೇಸೀಯಸ್ ಡಿಸೋಜರ ನಿಧನದ ನಂತರ ಉಪಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಜಯಗಳಿಸಿದ್ದರು. ಈಗ ತೆರವಾಗಿರುವ ಅವರ ಸ್ಥಾನಕ್ಕೆ ಖಂಡಿತ ನಾವು ಪ್ರಬಲ ಪೈಪೋಟಿ ನೀಡಿ ಆ ಸ್ಥಾನವನ್ನು ಮರು ಪಡೆಯುತ್ತೇವೆ ಎಂದು ಮಂಜುನಾಥ ಭಂಡಾರಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ , ಆರ್ ಪದ್ಮರಾಜ್, ಜಾಕಿಮ್, ಲಾರೆನ್ಸ್ ಸುಹಾನ್ ಅಳ್ವಾ, ಸುಬೋದ್ ಆಳ್ವಾ, ಸುಭಾಷ್ ಚಂದ್ರ ಕೊಲ್ನಾಡ್, ಮನುರಾಜ್ ಮೊದಲಾದವರು ಉಪಸ್ಥಿತರಿದ್ದರು.