image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಿಂದೂ

ಸಿಂದೂ

ಸಿಂಧೂ ನದಿ ಏಷ್ಯಾದಲ್ಲೇ ಅತ್ಯಂತ ಉದ್ದದ ನದಿಗಳಲ್ಲಿ ಒಂದಾಗಿದೆ. ಮಾನಸ ಸರೋವರದ ಉತ್ತರಕ್ಕೆ ಸುಮಾರು 100ಕಿ.ಮಿ ದೂರದ, ಸಮುದ್ರ ಮಟ್ಟದಿಂದ ಸುಮಾರು 17000 ಅಡಿಗಳಷ್ಟು ಎತ್ತರದ ಕೈಲಾಸ ಪರ್ವತದಲ್ಲಿ ಹುಟ್ಟುತ್ತದೆ. ಇಲ್ಲಿಂದ ಸಿಂಧೂ ನದಿಯೊಂದಿಗೆ ಸಟ್ಲೇಜ್ ಮತ್ತು ಬ್ರಹ್ಮಪುತ್ರ ನದಿಗಳು ಕೂಡ ಹರಿಯುತ್ತದೆ. ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರದೇಶದ ಮೂಲಕ ಹರಿದು ಸ್ಕರ್ಡೂ ಎಂಬಲ್ಲಿ ಶಯೋಕ್ ನದಿ ಸೇರಿಕೊಳ್ಳುತ್ತದೆ. ಸಿಂಧುವನ್ನು ಸಿಂಗ ಗೆ ಚೂ ಅಂದರೆ ಟಿಬೇಟ್ ಬಾಷೆಯಲ್ಲಿ ಸಿಂಹದ ತಂದೆ ಎಂದು ಕರೆಯುತ್ತಾರೆ. ಮುಂದೆ ಕಾಶ್ಮೀರಕ್ಕೆ ಬರುವಾಗ ಉಗಮಸ್ಥಾನದಿಂದ ಸುಮಾರು 4000 ಅಡಿಗಳಷ್ಟು ಕೆಳಗೆ ಬಂದಿರುತ್ತದೆ. ಹಿಮಾಲಯದ ಕಡಿದಾದ ಕಣಿವೆಗಳಲ್ಲಿ ಹರಿದು ಬರುವ ಸಿಂಧೂ ಪಂಜಾಬ್‌ನ ಅಟಕ್ ಪ್ರದೇಶದಲ್ಲಿ ಬಯಲು ಸೇರುತ್ತಾಳೆ. ಈಗ ಇವಳು ಸಮುದ್ರ ಮಟ್ಟದಿಂದ ಕೇವಲ ಸಾವಿರದೈನೂರು ಅಡಿಗಳಷ್ಟು ಎತ್ತರದಲ್ಲಿರುತ್ತಾಳೆ. ಅಟಕ್ ಹತ್ತಿರ ಕಾಬೂಲ್ ನದಿಯೂ ಸೇರಿ ಸುಮಾರು 800 ಅಡಿಗಳಷ್ಟು ಅಗಲಗೊಂಡು, ಮಿಥುನ್‌ಕೋಟ್ ಎಂಬಲ್ಲಿ ಐದು ಪ್ರಮುಖ ನದಿಗಳಾದ ಝೀಲಂ, ಚೆನಾಬ್ ರವಿ, ಬಿಯಾಸ್ ಮತ್ತು ಸಂಟ್ಲೆಜ್ ಪೂರ್ವ ಭಾಗದಲ್ಲಿ ಸಿಂಧೂ ನದಿಯನ್ನು ಸೇರುತ್ತವೆ. ಜೊತೆಗೆ ಸಣ್ಣ ನದಿಗಳಾದ ಹ್ಯಾರೋ ಮತ್ತು ಸೋನ್ ಕೂಡ ಸಿಂಧೂಗೆ ಸೇರುವುದು. ಪಶ್ಚಿಮ ಬದಿಯಲ್ಲಿ ಹಲವಾರು ಸಣ್ಣ ನದಿಗಳು ಸಿಂಧೂಗೆ ಸೇರುತ್ತದೆ.

ಇವುಗಳಲ್ಲಿ ಕಾಬೂಲ್ ದೊಡ್ಡ ನದಿ ಮತ್ತು ಅದರ ಮುಖ್ಯ ಉಪನದಿಗಳಾದ ಸ್ವಾತ್, ಪಂಜಕೊರ ಮತ್ತು ಕುನಾರ್. ಸಿಂಧೂ ನದಿಯ ವಾರ್ಷಿಕ ಹರಿವು ನೈಲ್ ನದಿಯ ಎರಡರಷ್ಟು ಮತ್ತು ಟೈಗ್ರಿಸ್ ಮತ್ತು ಯೂಫ್ರಟಿಸ್ ನದಿಗಳ ಒಟ್ಟು ಹರಿವಿನ ಮೂರರಷ್ಟು. ಪ್ರಾಚೀನ ಭಾರತದ ಸುಮಾರು ಕ್ರಿ.ಪೂ 1500 ರ ಋಗ್ವೇದದ ಆರ್ಯರು ರಚನೆ ಮಾಡಿದ ಶ್ಲೋಕಗಳಲ್ಲಿ ಸಿಂಧೂ ನದಿಯನ್ನು ಉಲ್ಲೇಖಿಸುತ್ತವೆ. ಅದೇ ದೇಶದ ಹೆಸರಿನ ಮೂಲವಾಗಿದೆ ಎನ್ನಲಾಗುತ್ತದೆ. ವೈದಿಕ ಸಾಹಿತ್ಯದಲ್ಲೂ ಸಿಂಧೂ ನದಿಯ ಉಲ್ಲೇಖವನ್ನು ನೋಡಬಹುದು. ಮಹಾಕಾವ್ಯ, ಪುರಾಣಗಳಲ್ಲಿಯೂ ನದಿಯ ಮಹಿಮೆಯನ್ನು ಹಾಡಿದ್ದಾರೆ. ಸಿಂಧೂ ಎಂಬುದು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನ ಶಬ್ಧ ಎಂದರೆ ತಪ್ಪಾಗಲಾರದು. ಇನ್ನು ಪುರಾಣಗಳಲ್ಲಿಯೂ ನಾವು ಸಿಂಧುವಿನ ಉಲ್ಲೇಖವನ್ನು ಕೇಳಿದ್ದೇವೆ.

ಪರಶಿವನು, ದಕ್ಷ ಯಜ್ಙ ದಲ್ಲಿ ಆಹುತಿಗೊಂಡ ಸತಿಯ ಶರೀರವನ್ನು ಹೊತ್ತುಕೊಂಡು ಭರತ ವರ್ಷದಲ್ಲೆಲ್ಲಾ ಸುತ್ತುತ್ತಿದ್ದನು, ಆಗ ಕರಾಚಿಯ ಬಳಿ ಸತಿಯ ಬ್ರಹ್ಮರಂಧ್ರವು ಕಳಚಿ ಬೀಳುತ್ತದೆ. ಈ ಭಾಗವೇ ಸಿಂಧೂ ಮತ್ತು ಬಲೂಚಿಸ್ಥಾನ ಗಡಿಯಲ್ಲಿರುವ ಹಿಂಗುತಾಳ ಎನ್ನಲಾಗುತ್ತದೆ. ಇಲ್ಲಿ ಭೈರವಿದೇವಿಯ ಶಕ್ತಿಪೀಠವಿದೆ. ರಾಮಾಯಣದಲ್ಲಿ ದಶರಥನು ಕೋಪಿಸಿ ಕೂತ ಕೈಕೇಯಿಗೆ “ ನನ್ನ ಸಾಮ್ರಾಜ್ಯದಲ್ಲಿ ಸೂರ್ಯನು ಮುಳುಗುವುದಿಲ್ಲ. ಸಿಂದು, ಸೌವ್ವೀರ, ಸೌರಾಷ್ಟೃ, ಅಂಗ, ವಂಗ, ಮಗಧ, ಕಾಶಿ ಕೋಸಲ ಎಲ್ಲವೂ ಸೇರಿದೆ. ಇವುಗಳಲ್ಲಿ ಬಹುಮುಖ್ಯವಾದದ್ದು ನಿನಗೇನು ಬೇಕು ಕೇಳು” ಎನ್ನುತ್ತಾನೆ ಇಲ್ಲಿಯೂ ಸಿಂಧುವಿನ ವಾಖ್ಯಾನ ನೋಡಬಹುದು. ಮಹಾಭಾರತ ಕಾಲದಲ್ಲಿ ಸಿಂಧೂ ದೇಶವನ್ನು ದೃತರಾಷ್ಟçನ ಅಳಿಯನಾದ ಜಯದ್ರಥನು ಆಳುತ್ತಿದ್ದನು. ಸಿಂಧು ನದಿ ಸ್ನಾನ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎನ್ನುವುದು ಕೂಡ ಮಹಾಭಾರತದಲ್ಲಿ ಉಲ್ಲೇಖವಾಗಿರುವುದನ್ನು ನೋಡಬಹುದು.

ಭಗವಾನ್ ಬುದ್ಧನು ಕೂಡ ಸಿಂದೂ ನದಿ ಪ್ರದೇಶಗಳಿಗೆ ಬೇಟಿ ನೀಡಿದ್ದ ಎನ್ನುವುದರ ಉಲ್ಲೇಖವಿದೆ ಇದರ ಕುರುಹಾಗಿ ಸಿಂಧ್ ಪ್ರಾಂತ್ಯದಲ್ಲಿ ಇಂದಿಗೂ ಬೌದ್ಧಸ್ತೂಪಗಳನ್ನು ಕಾಣಬಹುದು. ಕಾಶ್ಮೀರದ ಪ್ರಾಚೀನ ಗ್ರಂಥ ರಾಜತರಂಗಿಣಿಯಲ್ಲಿಯೂ ಸಿಂಧೂ ನದಿಯ ಬಗ್ಗೆ ಉಲ್ಲೇಖವಿದೆ. ಕಾಶ್ಮೀರದ ಮೂಲಕ ಉತ್ತರ ಪಾಕಿಸ್ಥಾನಕ್ಕೆ ಹರಿದು, ಉಗಮಸ್ಥಾನದಿಂದ ಸುಮಾರು 3200 ಕಿ.ಮಿ.ಗಳ ಸುದೀರ್ಘ ಪ್ರಯಾಣವನ್ನು ಕರಾಚಿ ನಗರದ ಬಳಿ ಅರಬ್ಬಿ ಸಮುದ್ರಲ್ಲಿ ಅಂತ್ಯಗೊಳಿಸುತ್ತಾಳೆ ಸಿಂಧೂ.

Category
ಕರಾವಳಿ ತರಂಗಿಣಿ