ನವದೆಹಲಿ: ದೆಹಲಿಯಲ್ಲಿ 12 ಮಂದಿಯ ಸಾವಿಗೆ ಕಾರಣವಾದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಂದ ಸ್ಫೋಟಕ ಅಂಶಗಳು ಬೆಳಕಿಗೆ ಬರುತ್ತದ್ದು, ಈ ಹಿಂದೆ ಭಾರತ ಪಾಕಿಸ್ತಾನ ಸೇನೆ ಮತ್ತು ಅಲ್ಲಿನ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಆಪರೇಷನ್ ಸಿಂದೂರ್ ಸೇನಾ ಕಾರ್ಯಾಚರಣೆ ನಡೆಸಿತ್ತು. ಇದು ಜಾಗತಿಕವಾಗಿ ಪಾಕಿಸ್ತಾನಕ್ಕೆ ತೀವ್ರ ಮುಜುಗುರ ತಂದಿತ್ತು. ಅಲ್ಲದೆ ಇದೇ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಉಗ್ರಗಾಮಿ ಸಂಘಟನೆ ಜೈಶ್ ಇ ಮೊಹಮದ್ ಸಂಘಟನೆ ಕೂಡ ಅಪಾರ ಪ್ರಮಾಣದ ನಷ್ಟ ಅನುಭವಿಸಿತ್ತು. ಪ್ರಮುಖವಾಗಿ ಜೈಶ್ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಕುಟುಂಬಸ್ಥರು ಸಾವಿಗೀಡಾಗಿದ್ದರು. ಜೈಶ್ ಉಗ್ರಗಾಮಿಗಳೂ ಕೂಡ ಸಾವನ್ನಪ್ಪಿ ಆತನೆ ಸಂಘಟನೆ ಡೋಲಾಯ ಸ್ಥಿತಿ ತಲುಪಿತ್ತು. ಇದೇ ಕಾರಣಕ್ಕೆ ಮಸೂದ್ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದ. ಮಾತ್ರವಲ್ಲದೇ ಭಾರತದ ವಿರುದ್ಧ ದೊಡ್ಡ ಮಟ್ಟದ ದಾಳಿ ನಡೆಸುವುದಾಗಿ ಶಪಥಗೈದಿದ್ದ ಎನ್ನಲಾಗಿದೆ.
ಇದೀಗ ಉಗ್ರ ಮಸೂದ್ ಅಜರ್ ಭಾರತ ಸೇರಿದಂತೆ ತನ್ನ ಹೆಜ್ಜೆಗುರುತನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳನ್ನು ಚುರುಕುಗೊಳಿಸಿದೆ ಮತ್ತು ಅಕ್ಟೋಬರ್‌ನಲ್ಲಿ ಜಮಾತ್-ಉಲ್-ಮೊಮಿನಾತ್ ಎಂಬ ಹೆಸರಿನ ತನ್ನ ಮೊದಲ ಮಹಿಳಾ ಘಟಕದ ರಚನೆಯನ್ನು ಘೋಷಿಸಿದೆ ಎಂದು ವರದಿಯಾಗಿದೆ. ಹೊಸ ಘಟಕಕ್ಕೆ ನೇಮಕಾತಿ ಅಕ್ಟೋಬರ್ 8 ರಂದು ಪಾಕಿಸ್ತಾನದ ಬಹಾವಲ್ಪುರದ ಮಾರ್ಕಾಜ್ ಉಸ್ಮಾನ್-ಒ-ಅಲಿಯಲ್ಲಿ ಪ್ರಾರಂಭವಾಯಿತು. ಮಹಿಳಾ ಬ್ರಿಗೇಡ್ ಅನ್ನು ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅಜರ್ ನೇತೃತ್ವ ವಹಿಸಲಿದ್ದಾರೆ ಎಂದು ವರದಿಯಾಗಿತ್ತು. ಈ ಗುಂಪು ಜೆಇಎಂ ಕಮಾಂಡರ್‌ಗಳ ಪತ್ನಿಯರನ್ನು ಮತ್ತು ಬಹಾವಲ್ಪುರ್, ಕರಾಚಿ, ಮುಜಫರಾಬಾದ್, ಕೋಟ್ಲಿ, ಹರಿಪುರ್ ಮತ್ತು ಮನ್ಸೆಹ್ರಾದಲ್ಲಿರುವ ತನ್ನ ಕೇಂದ್ರಗಳಲ್ಲಿ ಅಧ್ಯಯನ ಮಾಡುತ್ತಿರುವ ಆರ್ಥಿಕವಾಗಿ ದುರ್ಬಲ ಮಹಿಳೆಯರನ್ನು ಸೇರಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಇದಕ್ಕೆ ಇಂಬು ನೀಡುವಂತೆ ಭಾರತದಲ್ಲಿ ಬಂಧನಕ್ಕೀಡಾಗಿರುವ ಲಕ್ನೋ ಮೂಲದ ಮಹಿಳಾ ವೈದ್ಯೆ ಶಹೀನ್ ಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (ಜೆಇಎಂ) ಗೆ ಮಹಿಳಾ ವಿಭಾಗವನ್ನು ಸ್ಥಾಪಿಸುವ ಮತ್ತು ನೇಮಕಾತಿ ಮಾಡುವ ಜವಾಬ್ದಾರಿ ನೀಡಲಾಗಿತ್ತು ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ ಎಂದು ವರದಿಯಾಗಿದೆ.