ಸ್ಮರಣಾತ್ ಜನ್ಮಜಂ ಪಾಪಂ, ದರ್ಶನೇನ ತ್ರಿಜನ್ಮಜಂ| ಸ್ನಾನಾಜ್ಜನ್ಮ ಸಹಸ್ರಾಖ್ಯಾಂ ಹಂತಿ ರೇವಾ ಕಲೌ ಯುಗೇ || ಅಂದರೆ ಕೇವಲ ನಾಮಸ್ಮರಣೆಯಿಂದ ಈ ಜನ್ಮದ, ದರ್ಶನದಿಂದ ಮೂರು ಜನ್ಮದ ಮತ್ತು ಸ್ನಾನ ಮಾಡುವುದರಿಂದ ಸಹಸ್ರ ಜನ್ಮಗಳ ಪಾಪವನ್ನು ರೇವಾ(ನರ್ಮದೆ) ಕಳೆಯುತ್ತಾಳೆ ಎನ್ನುವುದು ಈ ಸಾಲಿನ ಅರ್ಥ. ನರ್ಮದೆಯು ಮಧ್ಯ ಭಾರತದಲ್ಲಿ ಹರಿಯುವ ಭಾರತ ಉಪಖಂಡದ ಐದನೆಯ ಅತಿ ದೊಡ್ಡ ನದಿ. ನರ್ಮದಾ ನದಿಯು ಉತ್ತರ ಮತ್ತು ದಕ್ಷಿಣ ಭಾರತಗಳ ನಡುವಿನ ಸಾಂಪ್ರದಾಯಿಕ ಗಡಿ ಎಂದು ಪರಿಗಣಿಸಲ್ಪಡುತ್ತದೆ. ಮಧ್ಯ ಪ್ರದೇಶ ರಾಜ್ಯದ ಶಾಹ್‌ದೋಲ್ ಜಿಲ್ಲೆಯ ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದ ಅಮರಕಂಟಕ ಬೆಟ್ಟದ ನರ್ಮದಾ ಕುಂಡ ಎಂಬ ಸಣ್ಣ ಕುಂಡದಿAದ ಉಗಮಿಸುವ ನರ್ಮದಾ ನದಿ ಮುಂದೆ ಸುಮಾರು ೧೩೧೨ ಕಿ.ಮೀ.ಗಳಷ್ಟುದೂರ ಪಶ್ಚಿಮಾಭಿಮುಖವಾಗಿ ಹರಿದು ಗುಜರಾತ್ ರಾಜ್ಯದ ಭರೂಚ್ ನಗರದ ಬಳಿ ಖಂಬಾತ್ ಕೊಲ್ಲಿಯನ್ನು ಸೇರುತ್ತದೆ. ವಿಂಧ್ಯ ಮತ್ತು ಸಾತ್ಪುರ ಪರ್ವತಶ್ರೇಣಿಗಳ ನಡುವಿನ ಬಿರುಕು ಕಣಿವೆಯಲ್ಲಿ ಹರಿಯುವ ನರ್ಮದಾ ನದಿ ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ವಿಶಾಲ ಪ್ರದೇಶಗಳಿಗೆ ಮುಖ್ಯ ನೀರಿನಾಸರೆಯಾಗಿದ್ದಾಳೆ. ಈ ನದಿಯು ಹಿಂದೂ ಸಂಸ್ಕೃತಿಯಲ್ಲಿ ಅತಿ ಪವಿತ್ರಸ್ಥಾನವನ್ನು ಹೊಂದಿದೆ. ನರ್ಮದಾ ತೀರದಲ್ಲಿ ಹಲವಾರು ಪವಿತ್ರ ಕ್ಷೇತ್ರಗಳಿದ್ದು, ಅವುಗಳಲಿ “ಅಮರ್ಕಂತಕ್” ಮಧ್ಯಪ್ರದೇಶದ ಅನುಪ್ಪೂರು ಜಿಲ್ಲೆಯಲ್ಲಿದೆ. ರಾಜ್ಯ ಮತ್ತು ಅದರ ಸುತ್ತಮುತ್ತಲಿನ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಪ್ರಾಚೀನ ದೇವಾಲಯಗಳು ಮತ್ತು ಇತರ ಐತಿಹಾಸಿಕ ತಾಣಗಳಿಗೆ ಹೆಸರುವಾಸಿಯಾಗಿದೆ. ಈ ಪ್ರದೇಶವು ಔಷಧೀಯ ಸಸ್ಯಗಳು ಮತ್ತು ಸಮೃದ್ಧ ಕಾಡುಗಳಿಂದ ಕೂಡಿದೆ. ಜಬಲ್ಪುರ್ ಮಧ್ಯಪ್ರದೇಶದ ಮಹತ್ವದ ನಗರಗಳಲ್ಲಿ ಒಂದಾಗಿದ್ದು ಅಮೃತಶಿಲೆ ಶಿಲಾ ತಾಣಗಳು, ಧುವಾಂಧರ್ ಜಲಪಾತ ಮತ್ತುಸುಂದರವಾದ ನದಿ ತೀರಗಳಿಗೆ ಬಹಳ ಜನಪ್ರಿಯವಾಗಿದೆ. ಹೋಶಂಗಾಬಾದ್ ಮಧ್ಯಪ್ರದೇಶದ ಮತ್ತೊಂದು ಜನಪ್ರಿಯ ಪ್ರವಾಸಿ ತಾಣವಾಗಿದೆ.