image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತಲಪಾಡಿಯಿಂದ ಸುರತ್ಕಲ್ ವರೆಗೆ ರಿಂಗ್ ರೋಡ್‌ ಮಾಡಲು ಯೋಜನೆ ರೂಪಿಸಲಾಗಿದೆ- ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ತಲಪಾಡಿಯಿಂದ ಸುರತ್ಕಲ್ ವರೆಗೆ ರಿಂಗ್ ರೋಡ್‌ ಮಾಡಲು ಯೋಜನೆ ರೂಪಿಸಲಾಗಿದೆ- ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ತಲಪಾಡಿಯಿಂದ ಸುರತ್ಕಲ್ ವರೆಗೆ ರಿಂಗ್ ರೋಡ್‌ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅವರು ನಗರದ ನೆಹರೂ ಮೈದಾನದಲ್ಲಿ ಶನಿವಾರ ಜಿಲ್ಲಾ ಮಟ್ಟದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ರಾಜ್ಯೋತ್ಸವ ಸಂದೇಶ ನೀಡಿ, ನಗರ ವ್ಯಾಪ್ತಿಯಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ತಲಪಾಡಿಯಿಂದ ಸುರತ್ಕಲ್ ವರೆಗೆ ರಿಂಗ್ ರೋಡ್ ನಿರ್ಮಿಸಲು ಸರಕಾರ ಯೋಜನೆ ರೂಪಿಸಲಿದೆ ಎಂದರು.ಪಣಂಬೂರು ಮತ್ತು ತಣ್ಣೀರುಬಾವಿ ಕಡಲ ತೀರಗಳ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಜಾರಿಗೊಳಿಸಲು ಕಾರ್ಯಾದೇಶ ನೀಡಲಾಗಿರುತ್ತದೆ. ವಿವಿಧ ಪ್ರವಾಸಿ ಕಾರ್ಯಕ್ರಮಗಳಿಗೆ ಅನುದಾನ ನೀಡುವ ಮೂಲಕ ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸಲು ಒತ್ತು ನೀಡಲಾಗುತ್ತಿದೆ.ಮಂಗಳೂರಿನಲ್ಲಿ ಬಹುನಿರೀಕ್ಷಿತ ರಂಗಮಂದಿರ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಆ ಮೂಲಕ ಜಿಲ್ಲೆಯ ಸಾಹಿತ್ಯ ರಂಗಾಸಕ್ತರ ದೀರ್ಘಕಾಲದ ಬೇಡಿಕೆಗೆ ಸರಕಾರ ಸ್ಪಂದಿಸಿದೆ ಎಂದು ಅವರು ಹೇಳಿದರು.

ಆಡಳಿತವನ್ನು ಜನಸಾಮಾನ್ಯರತ್ತ ಕೊಂಡೊಯ್ದು ಅವರಲ್ಲಿ ಸಂತೃಪ್ತಿಯನ್ನು ಮೂಡಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ. ಪರಿಶಿಷ್ಠ ಜನಾಂಗ, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು, ವಿಶೇಷವಾಗಿ ದುರ್ಬಲರು ಮತ್ತು ಕೃಷಿ ಕಾರ್ಮಿಕರ ಕಲ್ಯಾಣಕ್ಕಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದು ಪ್ರತಿಯೊಬ್ಬರಲ್ಲಿಯೂ ಹರುಷವನ್ನು ತಂದಿದೆ. ರಾಜ್ಯದ ಬಹುತೇಕ ಜನರು ಇಂದು ಸರಕಾರದ ಒಂದಿಲ್ಲೊ ಂದು ಯೋಜನೆಯಲ್ಲಿ ನೇರ ಫಲಾನುಭವಿಗಳಾಗಿ ಪ್ರಯೋಜನ ಪಡೆಯುತ್ತಿದ್ದಾರೆ.ರಾಜ್ಯ ಸರಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸುಖೀ ರಾಜ್ಯ ನಿರ್ಮಿಸುವತ್ತ ದಿಟ್ಟ ಹೆಜ್ಜೆಗಳನ್ನಿಟ್ಟಿದ್ದೇವೆ. ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ, ಮನೆಯಲ್ಲಿಯೇ ಕುಳಿತು ಈ ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಅತ್ಯಂತ ಸರಳವಾದ ಪ್ರಕ್ರಿಯೆಯು ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ಆ ಮೂಲಕ ಜನಸಾಮಾನ್ಯರ ಮನೆಬಾಗಿಲಿಗೆ ಗ್ಯಾರಂಟಿ ಯೋಜನೆಗಳು ಸರಾಗವಾಗಿ ತಲುಪಿವೆ. ಆರ್ಥಿಕ ಸಶಕ್ತತೆ ಮತ್ತು ಮಹಿಳಾ ಸಬಲೀಕರಣದ ಮೂಲಕ ರಾಜ್ಯದ ಜನರು ನೆಮ್ಮದಿ, ಘನತೆ ಮತ್ತು ಗೌರವದಿಂದ ಜೀವನ ಸಾಗಿಸುತ್ತಿರುವುದು ಪ್ರಚಲಿತ ಜಗತ್ತಿನ ಮಹತ್ತರ ವಿದ್ಯಮಾನವಾಗಿದೆ.ಗೃಹ ಜ್ಯೋತಿ ಯೋಜನೆಯಡಿ ದಕ್ಷಣ ಕನ್ನಡ ಜಿಲ್ಲೆಯಲ್ಲಿ 5.51 ಲಕ್ಷ ಫಲಾನುಭವಿಗಳು ಸೌಲಭ್ಯ ಪಡೆಯುತ್ತಿದ್ದು ಇದುವರೆಗೆ ರೂ. 789 ಕೋಟಿ ರೂಪಾಯಿ ಮೊತ್ತವನ್ನು ರಾಜ್ಯ ಸರಕಾರವು ಪಾವತಿಸಿದೆ. ಶಕ್ತಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ 11.01 ಕೋಟಿ ಮಹಿಳಾ ಪ್ರಯಾಣಿಕರು ಸದುಪಯೋಗವನ್ನು ಪಡೆದುಕೊಂಡಿದ್ದು, ಒಟ್ಟು ಪ್ರಯಾಣ ವೆಚ್ಚ ರೂ. 373.81 ಕೋಟಿ ರೂ.ಗಳಾಗಿರುತ್ತದೆ.

ಕುಟುಂಬದ ಯಜಮಾನಿ ಮಹಿಳೆಗೆ ಪ್ರತೀ ತಿಂಗಳು ರೂ.2000 ನೀಡುವ ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 3.79 ಲಕ್ಷ ಮಹಿಳೆಯರಿಗೆ ಇದುವರೆಗೆ ಒಟ್ಟು ರೂ.1377 ಕೋಟಿ ಸಹಾಯಧನ ಮಂಜೂರಾಗಿರುತ್ತದೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ 11.76 ಲಕ್ಷ ಮಂದಿ ಫಲಾನುಭವಿಗಳಿಗೆ, ಪ್ರತಿ ಫಲಾನುಭವಿಗೆ ಹೆಚ್ಚುವರಿಯಾಗಿ 5 ಕೆ.ಜಿ.ಯಂತೆ ಉಚಿತವಾಗಿ ಅಕ್ಕಿಯನ್ನು ನೀಡಲಾಗುತ್ತಿದೆ.ಯುವನಿಧಿ ಯೋಜನೆಯಡಿ 5283 ಯುವಕ ಯುವತಿಯರಿಗೆ ರೂ. 9.54 ಕೋಟಿ ರೂ. ಮೊತ್ತದ ಆರ್ಥಿಕ ನೆರವು ನೀಡುವ ಮೂಲಕ ಅವರ ಕಷ್ಟಕಾಲದಲ್ಲಿ ಕೈಹಿಡಿದು ನೆರವು ನೀಡಿದ ತೃಪ್ತಿ ನಮಗಿದೆ.

ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಹಂತ-4 ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ 13 ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು ರೂ. 110 ಕೋಟಿ ಮಂಜೂರಾಗಿದ್ದು ಈ ಪೈಕಿ 144 ಕಾಮಗಾರಿಗಳು ಪೂರ್ಣಗೊಂಡಿವೆ. ಬಡಜನರಿಗೆ ಅಗ್ಗದ ದರದಲ್ಲಿ ಉಪಹಾರ ಒದಗಿಸುವ ಮಹತ್ವಾಕಾಂಕ್ಷೆ ಇಂದಿರಾ ಕ್ಯಾಂಟೀನ್ ಯೋಜನೆಯಡಿ ಜಿಲ್ಲೆಯಲ್ಲಿ 19 ಕ್ಯಾಂಟೀನ್‌ಗಳು ಮಂಜೂರಾಗಿವೆ. ಸ್ಥಳೀಯರ ಅವಶ್ಯಕತೆಗೆ ಅನುಗುಣವಾಗಿ ಹೊಸ ಮೆನುವಿನಂತೆ ಆಹಾರ ಸರಬರಾಜು ಮಾಡಲಾಗುತ್ತಿದೆ, ಹೊಸದಾಗಿ ಇನ್ನೂ 7 ಕ್ಯಾಂಟೀನ್ ಗಳನ್ನು ಪ್ರಾರಂಭಿಸುವ ಪ್ರಕ್ರಿಯೆ ನಡೆಯುತ್ತಿದೆ.

ಬಡಕುಟುಂಬಗಳಿಗೆ ಮನೆ ಒದಗಿಸುವ ಯೋಜನೆಯಲ್ಲಿ ಸ್ವಂತ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಲು ಈವರೆಗೆ ಜಿಲ್ಲೆಯ ಪಟ್ಟಣ ಪ್ರದೇಶಗಳಲ್ಲಿ 3541 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಈ ಪೈಕಿ 2969 ಮನೆಗಳು ಪೂರ್ಣಗೊಂಡಿವೆ. ಮಂಗಳೂರು ಮಹಾನಗರಪಾಲಿಕೆಯ ಸುರತ್ಕಲ್ ಇಡ್ಯಾದಲ್ಲಿ ಜಿ+3 ಮಾದರಿಯ ಗುಂಪುಮನೆ ಯೋಜನೆಯಲ್ಲಿ 792 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ.

ಸೋಮೇಶ್ವರ, ಬಜಪೆ, ಕಿನ್ನಿಗೋಳಿ, ಮೂಲ್ಕಿ ಮತ್ತು ಮೂಡಬಿದ್ರೆ ಪಟ್ಟಣಗಳಿಗೆ ನೀರು ಸರಬರಾಜು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಯೋಜನೆಗಳ ಕಾಮಗಾರಿಗಳು ಹಾಗೂ ಬಂಟ್ವಾಳ ಮತ್ತು ಉಳ್ಳಾಲ ಪಟ್ಟಣಕ್ಕೆ ಒಳಚರಂಡಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಸಣ್ಣ ನೀರಾವರಿ ಇಲಾಖೆಯಿಂದ ನೇತ್ರಾವತಿ ಎಡದಂಡೆ ಸಂರಕ್ಷಿಸಲು ಉಳ್ಳಾಲ ತಾಲೂಕಿನ ಪಾವೂರು - ಬೋಳಿಯಾರು ವರೆಗೆ ರೂ.40 ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ.

ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ, ಜಲಜೀವನ್ ಮಿಷನ್ ಯೋಜನೆಯಡಿ ಒಟ್ಟು 7 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಪ್ರಗತಿಯಲ್ಲಿವೆ. ಜಿಲ್ಲೆಯ 223 ಗ್ರಾಮ ಪಂಚಾಯತ್ ಗಳು ಒಣ ತ್ಯಾಜ್ಯವನ್ನು ನಿರ್ವಹಿಸಲು ಎಂ.ಆ‌ರ್.ಎಫ್. ಘಟಕ ಸೌಲಭ್ಯ ಕಲ್ಪಿಸಿರುವ ರಾಜ್ಯದ ಮೊದಲ ಜಿಲ್ಲೆಯಾಗಿದೆ.ಜಿಲ್ಲಾ ವೆನ್ಹಾಕ್ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕ್ಯಾಥ್ ಲ್ಯಾಬ್ ಅನ್ನು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗಿಸಿದೆ. ಆ ಮೂಲಕ ಅತಿ ಕಡಿಮೆ ವೆಚ್ಚದಲ್ಲಿ ಬಡವರಿಗೆ ಉನ್ನತ ಹೃದ್ರೋಗ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. 90 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಹೊರರೋಗಿ ವಿಭಾಗ(ಒಪಿಡಿ) ಕಟ್ಟಡ ನಿರ್ಮಿಸಲು ಅನುಮೋದನೆ ನೀಡಲಾಗಿದೆ.

ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಶಿಕ್ಷಣ ವ್ಯವಸ್ಥೆಯನ್ನು ಉನ್ನತೀಕರಣಗೊಳಿಸಲು ದಕ್ಷಿಣ ಕನ್ನಡ ಜಿಲ್ಲೆಯ 18 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ (ಕೆ.ಪಿ.ಎಸ್) ಗಳನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರಕಾರ ಇತ್ತೀಚೆಗೆ ಮಂಜೂರಾತಿ ನೀಡಿದೆ. ನರ್ಸರಿಯಿಂದ ಪದವಿಪೂರ್ವ ಶಿಕ್ಷಣದವರೆಗೆ ಒಂದೇ ಕ್ಯಾಂಪಸ್‌ನಲ್ಲಿ ಉನ್ನತ ಗುಣಮಟ್ಟದ ಶಿಕ್ಷಣವನ್ನೊದಗಿಸುವ ಕೆಪಿಎಸ್ ಮಾದರಿಯನ್ನು ಜಿಲ್ಲೆಯ ಇನ್ನಷ್ಟು ಶಾಲೆಗಳಿಗೆ ವಿಸ್ತರಿಸಲು ಗಮನಹರಿಸಲಾಗುವುದು.

ಪಣಂಬೂರು ಮತ್ತು ತಣ್ಣೀರುಬಾವಿ ಕಡಲತೀರಗಳ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಜಾರಿಗೊಳಿಸಲು ಕಾರ್ಯಾದೇಶ ನೀಡಲಾಗಿರುತ್ತದೆ. ವಿವಿಧ ಪ್ರವಾಸಿ ಕಾರ್ಯಕ್ರಮಗಳಿಗೆ ಅನುದಾನ ನೀಡುವ ಮೂಲಕ ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸಲು ಒತ್ತು ನೀಡಲಾಗುತ್ತಿದೆ.ಮಂಗಳೂರಿನಲ್ಲಿ ಬಹುನಿರೀಕ್ಷಿತ ರಂಗಮಂದಿರ ನಿರ್ಮಾಣಕ್ಕೆ ಟೆಂಡ‌ರ್ ಕರೆಯಲಾಗಿದೆ. ಆ ಮೂಲಕ ಜಿಲ್ಲೆಯ ಸಾಹಿತ್ಯ ರಂಗಾಸಕ್ತರ ದೀರ್ಘಕಾಲದ ಬೇಡಿಕೆಗೆ ಸರಕಾರ ಸ್ಪಂದಿಸಿದೆ.

ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಕೊಂಕಣಿ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ ಹಾಗೂ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಹೊಸದಾಗಿ ಬ್ಯಾರಿ ಭವನವನ್ನು ಉಳ್ಳಾಲ ತಾಲೂಕಿನ ಅಸೈಗೋಳಿ ಎಂಬಲ್ಲಿ ನಿರ್ಮಿಸಲು ರಾಜ್ಯ ಸರಕಾರ ಮಂಜೂರಾತಿ ನೀಡಿದೆ.

ಮಂಗಳೂರು ತಾಲೂಕಿನ ಕಸಬಾ ಹೋಬಳಿಯ ದೇರೆಬೈಲ್ ಗ್ರಾಮದ ಸರ್ವೆ ನಂ.129 ಮತ್ತು 113 ರಲ್ಲಿ 3.285 ಎಕ್ರೆ ಭೂಮಿಯನ್ನು "ವಾಣಿಜ್ಯ ಕಚೇರಿ ಟೆಕ್ ಪಾರ್ಕ್" ಆಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಡಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರವು ಈಗಾಗಲೇ ಅನುಮೋದನೆ ನೀಡಿದೆ. ಈ ಯೋಜನೆಯ ಪ್ರಾಥಮಿಕ ಉದ್ದೇಶವು ಪ್ರದೇಶದ ತಾಂತ್ರಿಕ ಭೂದೃಶ್ಯವನ್ನು ಹೆಚ್ಚಿಸುವುದು, ವೈವಿಧ್ಯಮಯ ತಂತ್ರಜ್ಞಾನ ಕಂಪೆನಿಗಳನ್ನು ಆಕರ್ಷಿಸುವುದು ಮತ್ತು ಗಣನೀಯ ಆರ್ಥಿಕ ಮತ್ತು ಉದ್ಯೋಗ ಬೆಳವಣಿಗೆಯನ್ನು ಹೆಚ್ಚಿಸುವುದಾಗಿದೆ. ಈ ಯೋಜನೆಯಿಂದ ಉದ್ಯೋಗಗಳ ಸೃಷ್ಟಿಯೊಂದಿಗೆ ಸ್ಥಳೀಯ ಜೀವನೋಪಾಯ ಮತ್ತು ಒಟ್ಟಾರೆ ಸಮೃದ್ಧಿ ಸುಧಾರಣೆಯ ನಿರೀಕ್ಷೆಯಿದೆ.ನಗರ ವ್ಯಾಪ್ತಿಯಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟನೆ ನಿಯಂತ್ರಿಸಲು ತಲಪಾಡಿ ಯಿಂದ ಸುರತ್ಕಲ್ ವರೆಗೆ ರಿಂಗ್ ರೋಡ್ ನಿರ್ಮಿಸಲು ಸರಕಾರ ಯೋಜನೆ ರೂಪಿಸಲಿದೆ.

ಸಹಬಾಳ್ವೆ, ಸಹಿಷ್ಣುತೆಗೆ ಹೆಸರಾದ ನಾವೆಲ್ಲರೂ ಈ ನಾಡಿನ ಪರಂಪರೆ, ಐತಿಹಾಸಿಕತೆ ಮತ್ತು ಸಂಸ್ಕೃತಿಯನ್ನು ಉಳಿಸಲು ಸದಾ ಬದ್ಧರಾಗಿರಬೇಕು. ಜಾತಿ-ಮತಗಳ ಬೇದಭಾವವನ್ನು ತೊರೆದು ಜಿಲ್ಲೆಯ ಎಲ್ಲ ಜನತೆ ಸಹೋದರ ಭಾವನೆಯಿಂದ ನಡೆದುಕೊಳ್ಳುವುದರ ಮೂಲಕ ರಾಜ್ಯ ಹಾಗೂ ಜಿಲ್ಲೆಯಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುವಲ್ಲಿ ಎಲ್ಲರೂ ಸಹಕರಿಸಬೇಕಾಗಿದೆ, ಈ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ನಾವೆಲ್ಲರೂ ಸೇರಿ ಶ್ರಮಿಸೋಣ ಎಂದು ಆಶಿಸುತ್ತೇನೆ ಎಂದರು.

Category
ಕರಾವಳಿ ತರಂಗಿಣಿ