image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸರಸ್ವತಿ

ಸರಸ್ವತಿ

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ| ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು|| ಈ ಶ್ಲೋಕವು ಸರಸ್ವತಿ ನದಿಯ ಇರುವಿಕೆ ಮತ್ತು ಅದರ ಬಗ್ಗೆ ನಮಗಿರುವ ಪೂಜ್ಯನೀಯ ಭಾವವನ್ನು ತೋರುತ್ತದೆ. ಹೌದು ವೈದಿಕ ಯುಗದಿಂದಲೂ ಆರಾದಿಸಲ್ಪಟ್ಟಿರುವ ಮಹಾನದಿ “ಸರಸ್ವತಿ”. ಋಗ್ವೇದದಲ್ಲಿಯೂ ಸರಸ್ವತಿ ಸೂಕ್ತವಿದೆ. ವೈದಿಕ ಸಾಹಿತ್ಯದಲ್ಲಿ ಸರಸ್ವತಿಯನ್ನು ವಿದವಿದವಾಗಿ ವರ್ಣಿಸಿದ್ದಾರೆ. ಮಹಾಕಾವ್ಯವಾದ ಮಹಾಭಾರತದಲ್ಲಿಯೂ ಸರಸ್ವತಿಯ ಬಗ್ಗೆ ಉಲ್ಲೇಖವಿದೆ. ಸರಸ್ವತಿಯನ್ನು ಗುಪ್ತಗಾಮಿನಿ ಎಂದು ಕರೆಯುತ್ತಾರೆ. ಇದರ ಹಿಂದೆ ಒಂದು ಪುರಾಣ ಕಥೆಯಿದೆ. ದಧೀಚಿಯ ಮಗನಾದ ಪಿಪ್ಪಲಾದನಿಂದ ಭುಗಿಲೆದ್ದ ವಡವಾನಲವು ದೇವತೆಗಳನ್ನು ಆಹುತಿ ತೆಗೆದುಕೊಳ್ಳುತ್ತಿತ್ತು. ಆಗ ಬ್ರಹ್ಮನು ವಡವಾನಲವನ್ನು ಸಮುದ್ರದಲ್ಲಿ ವಿಸರ್ಜಿಸುವಂತೆ ಸರಸ್ವತಿಗೆ ಹೇಳುತ್ತಾನೆ, ಆಗ ಸರಸ್ವತಿ ನದಿಧಾರಣೆ ಮಾಡಿ ಕಳಸದಲ್ಲಿ ವಡವಾನಲ ಸೇರಿಸಿಕೊಂಡು ಪಿಪ್ಪಲಾದಾಶ್ರಮದಿಂದ ಹೊರಡುತ್ತಾಳೆ. ಪಾಪಿಗಳು ಕಂಡಾಗ ಅದೃಶ್ಯವಾಗುವ ವರವನ್ನು ಬ್ರಹ್ಮನಿಂದ ಪಡೆದಿರುತ್ತಾಳೆ. ಆ ವರದ ಸಹಾಯದಿಂದ ವಿನಾಶನದಲ್ಲಿ ಭೂಗರ್ಭ ಸೇರುತ್ತಾಳೆ. ವಡವಾನಲದ ಕಾವು ಅತಿಯೆನಿಸಿದಾಗ ಭೂ ಬಾಗದಲ್ಲಿ ಕಾಣಿಸಿಕೊಂಡು ಪ್ರಭಾಸಕ್ಷೇತ್ರದಲ್ಲಿ ವಡವಾನಲವನ್ನು ವಿಸರ್ಜಿಸಿದಳು. ಇವಳ ಒಂದು ಶಾಖೆ ಪೂರ್ವವಾಹಿನಿಯಾಗಿ ಹರಿದು ಗುಪ್ತಗಾಮಿನಿಯಾಗಿ ಪ್ರಯಾಗದಲ್ಲಿ ಗಂಗೆ ಯಮುನೆಯರೊಂದಿಗೆ ಸೇರಿತು ಎಂಬ ನಂಬಿಕೆಯಿದೆ.

ಸುಮಾರು 4000 ವರ್ಷಗಳ ಹಿಂದೆ ಜೀವಂತವಾಗಿದ್ದ ಈ ನದಿ, ಹಿಮಾಲಯದಲ್ಲಿ ಹುಟ್ಟಿ ಈಗಿನ ಹರಿಯಾಣ, ಪಂಜಾಬ್, ರಾಜಸ್ಥಾನ, ಪಾಕಿಸ್ಥಾನ(ಕೆಲವು ಭಾಗ) ಹಾಗೂ ಗುಜರಾತ್ ಮೂಲಕ ಅರಬ್ಬಿ ಸಮುದ್ರ ಸೇರುತ್ತಿತ್ತು ಎಂದು ಬಹುತೇಕರು ನಂಬುತ್ತಾರೆ. ಹೆಚ್ಚು ಕಡಿಮೆ 1500 ಕಿ.ಮೀ.ನಷ್ಟು ದೀರ್ಘವಾಗಿ ಸರಸ್ವತಿ ಹರಿಯುತ್ತಿದ್ದಳು ಎನ್ನಲಾಗಿದೆ. ಹಿಂದೂ ಧರ್ಮದ ನಂಬಿಕೆಯ ಪ್ರಕಾರ, ಗಂಗಾ, ಯಮುನಾ, ಸಿಂಧು ನದಿಗಳಿಗೆಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯತೆ ಸರಸ್ವತಿ ನದಿಗೂ ಇದೆ. ಇದೆಲ್ಲ ನಮ್ಮ ನಂಬಿಕೆ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ್ದ ವಾದಗಳು. ಆದರೆ, ವಾಸ್ತವದಲ್ಲಿ ಸರಸ್ವತಿ ನದಿ ಹರಿಯುತ್ತಿತ್ತೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ 1819 ರಿಂದಲೇ ಆರಂಭವಾಗಿದೆ.  ಅಂದಿನಿಂದ ಇಂದಿನವರೆಗೂ ಕೈಗೊಂಡ ಅಧ್ಯಯನಗಳು, ಸಮೀಕ್ಷೆಗಳು ಬಹುತೇಕವಾಗಿ ಸರಸ್ವತಿ ನದಿ ಜೀವಂತವಾಗಿತ್ತು ಮತ್ತು ಅದು 4000 ವರ್ಷಗಳ ಹಿಂದೆ ಬತ್ತಿ ಹೋಯಿತು ಎಂಬುದನ್ನು sಸಾಬೀತುಪಡಿಸಿವೆ.

 

ಹರಿಯಾಣ, ಪಂಜಾಬ್, ರಾಜಸ್ಥಾನ, ಗುಜರಾತ್ ಮತ್ತು ಪಾಕಿಸ್ತಾನದ ಚೋಲಿಸ್ತಾನ ಪ್ರದೇಶದಲ್ಲಿನ ಘಗ್ಗರ್ ಹಾಗೂ ಅದರ ಉಪನದಿಗಳು ಸರಸ್ವತಿ ನದಿಯನ್ನು ಪ್ರತಿನಿಧಿಸುತ್ತಿದ್ದವು ಎಂದು ಕೆಲವರು ನಂಬುತ್ತಾರೆ. ಬತ್ತಿ ಹೋಗಿರುವ ಘಗ್ಗರ್ ನದಿಯ ಕಾಲುವೆಯ ಸಂಶೋಧನೆ ಮತ್ತು ಅದು ಹರಿಯುವ ದಿಕ್ಕಿನ ಕುರಿತು ಉತ್ಖನನ ನಡೆಸಲಾಗಿದೆ. ಪ್ರಾಚೀನ ನದಿ ಹಾಗೂ ಬಳಕೆಯಲ್ಲಿಲ್ಲದ ನದಿಗಳ ಅವಶೇಷಗಳು ಮತ್ತು ನದಿ ಹರಿಯುತ್ತಿದ್ದ ಮಾರ್ಗವನ್ನು ಪರೀಕ್ಷೆಗೊಳಪಡಿಸಿದಾಗ ಸರಸ್ವತಿ ನದಿ ಹರಿಯುತ್ತಿದ್ದದ್ದು ಖಚಿತವಾಗಿದೆ. ಶೋಧನೆಯ ವೇಳೆ ದೊರೆತ ಕುರುಹುಗಳನ್ನಾದರಿಸಿ ಹರಿಯಾಣದಲ್ಲಿರುವ ಸರಸುತಿ-ಮಾರ್ಕಂಡ ಹಳ್ಳಗಳು ಸರಸ್ವತಿ ನದಿಯ ಪೂರ್ವ ಶಾಖೆಗಳಾಗಿದ್ದರೆ, ಘಗ್ಗರ್-ಪತಿಯಾಲಿ ಕಾಲುವೆಗಳು ಪಶ್ಚಿಮ ಶಾಖೆಗಳಾಗಿದ್ದವು ಎಂದು ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ.

ಸರಸ್ವತಿ ನದಿ ಜೀವಂತವಾಗಿದ್ದಾಗ ಅದು ವಾಯವ್ಯ ಭಾರತದ ಜೀವನಾಡಿಯಾಗಿತ್ತು ಎಂಬುದನ್ನು ಈ ವರದಿ ದೃಢಿಕರಿಸುತ್ತಿದೆ. ಅದಾಗಲೇ ಅನೇಕ ಅಧ್ಯಯನ ವರದಿಗಳೂ ಕೂಡ ಇದೇ ಸತ್ಯವನ್ನು ಕಂಡುಕೊಂಡಿವೆ. ಈ ಹಿನ್ನೆಲೆಯಲ್ಲಿ ಸರಸ್ವತಿಯನ್ನು ಮತ್ತೆಜೀವಂತಗೊಳಿಸುವ ಕೆಲಸವನ್ನು ಕೇಂದ್ರ ಸರಕಾರ, ಹರಿಯಾಣ ಮತ್ತು ರಾಜಸ್ಥಾನ ಸರಕಾರಗಳು ಮಾಡುತ್ತಿವೆ. ಸರಕಾರಗಳ ಪ್ರಯತ್ನ ಫಲಪ್ರದವಾದರೆ, ಪುರಾಣದಲ್ಲಿಮಾತ್ರ ಹರಿಯುತ್ತಿದ್ದ ಸರಸ್ವತಿ, ಮತ್ತೆ ನದಿಯಾಗಿ ಹರಿದು ಸಮುದ್ರವನ್ನು ಸೇರಿಕೊಳ್ಳಬಹುದೇನೋ .....

 

Category
ಕರಾವಳಿ ತರಂಗಿಣಿ