ಬೆಂಗಳೂರು: ಮುಜರಾಯಿ ಇಲಾಖೆ ಅಧೀನದ ಬಿ ಮತ್ತು ಸಿ ವರ್ಗದ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ ಮಾಡುವ ಸಂಬಂಧ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ಆಯುಕ್ತರು 2016ರ ಜುಲೈ 12ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು ವಜಾಗೊಳಿಸಿದೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ದೇವಸ್ಥಾನಗಳ ವ್ಯವಸ್ಥಾಪನಾ ಸಂಘ 2016ರಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್ ಕಮಾಲ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ದೇವಸ್ಥಾನಗಳಿಗೆ ನಿರ್ವಹಣಾ ಸಮಿತಿಗಳ ರಚನೆಗೆ ಅವಕಾಶ ಮಾಡಿಕೊಡುವ ತಿದ್ದುಪಡಿ ಕಾಯ್ದೆಯನ್ನು ಅನೂರ್ಜಿತಗೊಳಿಸಿ, ಈ ಹಿಂದೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಹೊರಡಿಸಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ತಿದ್ದುಪಡಿ ಕಾಯ್ದೆಯಂತೆ ವ್ಯವಸ್ಥಾಪನಾ ಸಮಿತಿಗಳನ್ನು ರಚಿಸುವ ಅಧಿಕಾರ ಸರ್ಕಾರ ಹೊಂದಿದೆ ಎಂದು ಅಭಿಪ್ರಾಯಪಟ್ಟು, ಅರ್ಜಿ ವಜಾಗೊಳಿಸಿ ಆದೇಶಿಸಿತು.