ಮಂಗಳೂರು: ನನ್ನನ್ನು ಬೆಳೆಸಿದ್ದೇ ಮಾಧ್ಯಮ. ಬೆಂಗಳೂರಿನಲ್ಲಿ ಮಾಧ್ಯಮಗಳು ನನ್ನನ್ನು ಬೆಳೆಯಲು ಬಹಳಷ್ಟು ಸಹಕಾರ ನೀಡಿತು ಎಂದು ಖ್ಯಾತ ಸಂಗೀತ ನಿರ್ದೇಶಕ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ಡಾ. ಗುರುಕಿರಣ್ ಅವರನ್ನು ಮಂಗಳೂರು ಕಾರ್ಯನಿರತ ಪತ್ರಕರ್ತರ ಸಂಘದ 14ನೇ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿದ ನಂತರ ಹೇಳಿದರು. ನನ್ನನ್ನು ಬೆಳೆಸಿದ್ದೇ ಮಾಧ್ಯಮ. ಬೆಂಗಳೂರಿನಲ್ಲಿ ಮಾಧ್ಯಮಗಳು ನನ್ನನ್ನು ಬೆಳೆಯಲು ಬಹಳಷ್ಟು ಸಹಕಾರ ನೀಡಿತು. ನನ್ನ ಮೊದಲ ಚಿತ್ರದಲ್ಲಿ ಯಜ್ಞ ಮಂಗಳೂರು ಫೋಟೋ ತೆಗೆದಿದ್ರು ಎಂದು ಅಂದಿನ ದಿನಗಳನ್ನು ಮೆಲುಕು ಹಾಕಿಕೊಂಡರು.
”ನನಗೆ ಬೆನ್ನೆಲುಬು ಅಂತ ಯಾರೂ ಇರಲಿಲ್ಲ. ನಮ್ಮನ್ನು ಸಮಾಜದಲ್ಲಿ ಬೆಳೆಸೋದು ಸರಕಾರಿ ಕಾಲೇಜುಗಳು. ಎಲ್ಲ ಮನೋಸ್ಥಿತಿಯವರು ಒಟ್ಟಿಗೆ ಇರೋದ್ರಿಂದ ಅಲ್ಲಿ ಎಲ್ಲವನ್ನು ಕಲಿಯಲು ಆಗುತ್ತೆ. ಸರಕಾರಿ ಕಾಲೇಜು ನನ್ನ ಜೀವನದ ಮುಖ್ಯ ಭಾಗ. ಮ್ಯೂಸಿಕ್ ಅನ್ನು ಆರಿಸಿದ್ದು ಖುಷಿಗಾಗಿ. ನಾನು ಗಾಯಕ ಆಗಲು ಹೋದೆ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತು. ನಂತರ ಉಪೇಂದ್ರ ಮ್ಯೂಸಿಕ್ ಕಂಪೋಸ್ ಮಾಡಲು ಹೇಳಿದ್ರು, ಅಲ್ಲಿಂದ ಮ್ಯೂಸಿಕ್ ಡೈರೆಕ್ಟರ್ ಆದೆ. ನಾನು ಯಾವುದನ್ನೂ ಬೆನ್ನಟ್ಟಿ ಹೋಗಿಲ್ಲ. ಕಲಿಯೋದು ತುಂಬಾ ಇರುತ್ತೆ ನಾವು ಪ್ರತಿಯೊಂದನ್ನು ಕಲಿಯುತ್ತ ಹೋಗ್ಬೇಕು“ ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
”ಮ್ಯೂಸಿಕ್ ನಲ್ಲಿ ನಾನು ಎಜುಕೇಟೆಡ್ ಅಲ್ಲ ಹೋಗ್ತಾ ಹೋಗ್ತಾ ಕಲಿತೆ. ಜೀವನ ಅಂದ್ರೆ ಖುಷಿಯಾಗಿರೋದು ಅಷ್ಟೇ. 1983ರಲ್ಲಿ ಗುರುಕಿರಣ್ ನೈಟ್ಸ್ ಪ್ರಾರಂಭ ಮಾಡಿದೆ. ಮಂಗಳೂರಿನಲ್ಲಿ ಇದ್ದಾಗ ಕಾರ್ಯಕ್ರಮ ಮಾಡ್ತಾ ಇದ್ದೆ. ಬೆಂಗಳೂರಿಗೆ ಹೋದ ಮೇಲೆ ಕಡಿಮೆ ಮಾಡಿದೆ“ ಎಂದರು.
ಸಿನಿಮಾ ರಂಗದಲ್ಲಿ ಹೆಣ್ಣುಮಕ್ಕಳ ಶೋಷಣೆಯನ್ನು ತಡೆಯಲು ಕೇರಳ ಮಾದರಿ ಕಮಿಟಿ ರಚಿಸಬೇಕು ಎನ್ನುವ ಕೂಗಿನ ಬಗ್ಗೆ ಪತ್ರಕರ್ತೆಯ ಪ್ರಶ್ನೆಗೆ ಉತ್ತರಿಸಿದ ಗುರುಕಿರಣ್, “ಚಲನಚಿತ್ರರಂಗ ಮಾತ್ರ ಅಲ್ಲ. ಪ್ರತಿಯೊಂದು ಕಡೆಯೂ ಇಂತಹ ಶೋಷಣೆ ಅಗುತ್ತಿದೆ. ಪ್ರತಿಯೊಂದಕ್ಕೂ ಕಮಿಟಿ ಮಾಡಿದ್ರೆ ಕೆಲಸ ಮಾಡೋಕ್ಕೆ ಆಗಲ್ಲ. ಅಲ್ಲಿಂದ ಸಮಸ್ಯೆಗಳು ಶುರುವಾಗುತ್ತೆವೆ ಎನ್ನುವುದನ್ನು ನೋಡಬೇಕು. ಹೆಣ್ಣುಮಕ್ಕಳ ವಿಚಾರದಲ್ಲಿ ಎಷ್ಟೊಂದು ಫೇಕ್ ಕೇಸ್ ಗಳು ಆಗಲ್ಲ? ಭ್ರಷ್ಟಾಚಾರ ಜಾಸ್ತಿ ಆಗುತ್ತೆ ಅಷ್ಟೇ. ಕೆಲಸ ಇದ್ದವರು ಯಾರೂ ಇಂತಹ ಒತ್ತಾಯ ಮಾಡಲ್ಲ“ ಎಂದರು. ದರ್ಶನ್ ಕೇಸಲ್ಲೂ ಅಷ್ಟೇ ವೀವ್ಸ್ ಸಿಗುತ್ತೆ ಪ್ರಚಾರ ಸಿಗುತ್ತೆ. ಸುಮ್ಮನೆ ಕೆಲಸ ಇಲ್ದೆ ಇರುವವರು ಪಬ್ಲಿಸಿಟಿಗಾಗಿ ಮಾಡ್ತಿದಾರೆ. ಅದ್ರಿಂದ ಅವರಿಗೆ ಕೆಲಸ ಸಿಗುತ್ತೆ ಪ್ರಸಿದ್ಧಿ ಪಡೆಯಬಹುದು ಅಂತ ತಲೆಯಲ್ಲಿ ಇರುತ್ತೆ ಈ ಕಾರಣಕ್ಕೆ ಬೇರೆ ಬೇರೆ ಹೇಳಿಕೆ ಕೊಡ್ತಾರೆ.
ದರ್ಶನ್ ಪ್ರಕಾರಣದ ಕುರಿತು ಕೇಳಿದ ಪ್ರಶ್ನೆಗೆ, ”ಪ್ರಕರಣ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿ ಆಗಿದೆ ಸಿನಿಮಾಕ್ಕು ಅದಕ್ಕೂ ಸಂಬಂಧ ಇಲ್ಲ. ಜನರಿಗೆ ಒಳ್ಳೇದು ಬೇಡ ಕೆಟ್ಟದ್ದು ಬೇಕು, ಮಾಧ್ಯಮಗಳು ಅದನ್ನೇ ತೋರಿಸುತ್ತೆ. ಜೈಲಿಗೆ ಎಲ್ಲರನ್ನು ಭೇಟಿಯಾಗಲು ಹೋಗ್ತಾರೆ ಆದರೆ ದರ್ಶನ್ ಮಾತ್ರ ತೋರಿಸ್ತಾರೆ ಅಷ್ಟೇ“ ಎಂದರು. ವೇದಿಕೆಯಲ್ಲಿ ಮಂಗಳೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಪ್ರೆಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಹಿರಿಯ ಛಾಯಾಗ್ರಾಹಕ ಯಜ್ಞ ಮಂಗಳೂರು, ಇಬ್ರಾಹಿಂ ಅಡ್ಕಸ್ಥಳ, ಮಾಧ್ಯಮ ಅಕಾಡೆಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಭಾಸ್ಕರ್ ರೈ ಕಟ್ಟ ಮತ್ತಿತರರು ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ ಬಿ.ಎನ್. ಧನ್ಯವಾದ ಸಮರ್ಪಿಸಿದರು.