ಮಂಗಳೂರು: ಜಾತಿ ಜನಗಣತಿಯ ಬಗ್ಗೆ ಸಮರ್ಪಕವಾಗಿ ಜನಸಾಮಾನ್ಯರಿಗೆ ಮಾಹಿತಿ ನೀಡದೆ ಸಮೀಕ್ಷೆ ನಡೆಸಲು ಮುಂದಾಗಿರುವುದು ಸರಿಯಲ್ಲ. ಅದೂ ಅಲ್ಲದೆ ಜಾತಿಗಣತಿ ನಡೆಸಬೇಕಾದವರಿಗೂ ಇದರ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರಿಗೆ ಮುಂಚಿತವಾಗಿ ಮಾಹಿತಿ ನೀಡಿ ಪೂರ್ವ ತಯಾರಿಯೊಂದಿಗೆ ಸಮೀಕ್ಷೆ ಆರಂಭಿಸುವುದು ಸೂಕ್ತ. ತರಾತುರಿಯಲ್ಲಿ ಸಮೀಕ್ಷೆ ನಡೆಸುವ ಬದಲು ಸಮೀಕ್ಷೆಯನ್ನು ಮುಂದೂಡಬೇಕು ಎಂದು ಹೇಳಿದ್ದಾರೆ.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಈ ಸಮೀಕ್ಷೆಯ ಬಗ್ಗೆ ಸಾಕಷ್ಟು ಗೊಂದಲವಿರುವಂತೆ ಕಾಣುತ್ತಿದೆ. ಇದರಲ್ಲಿ ಕಾಂಗ್ರೆಸ್ ನ ಹಿಡನ್ ಅಜೆಂಡಾ ಇದ್ದಂತಿದೆ ಎಂದು ಆರೋಪಿಸಿದರು. ದರ್ಮದ ಕಾಲಮ್ ನಲ್ಲಿಯೂ ಅನೇಕ ಗೊಂದಲವಿದೆ. ಮನೆ ಮಂದೆ ಯಾರೋ ಚೀಟಿ ಅಂಟಿಸುತ್ತಾರೆ, ಇನ್ಯಾರೋ ಮನೆಯವರ ಪೋನ್ ನಂಬರ್ ಕಲೆಕ್ಟ್ ಮಾಡುತ್ತಾರಂತೆ ಆಮೇಲೆ ಇನ್ಯಾರೋ ಫೋನಿನಲ್ಲಿ ವಿವರ ತಿಳಿದುಕೊಳ್ಳುತ್ತಾರಂತೆ. ಹೀಗೆ ಮಾಡಿದರೆ ಅದು ಹೇಗೆ ಗಣತಿ ಸರಿ ಆಗಲು ಸಾಧ್ಯ ಎಂದು ಪ್ರಶ್ನಿಸಿದರು. ವರ್ಷಗಟ್ಟಲೆ ಸಮೀಕ್ಷೆ ಮಾಡಿ ಮಾಡಿದ ಕಾಂತರಾಜು ಅಯೋಗ ಸರಿ ಇಲ್ಲ ಎನ್ನುವಾಗ ಇಪ್ಪತ್ತು ದಿನದಲ್ಲಿ ರಾಜ್ಯದ ಜಾತಿ ಗಣತಿ ಸರಿಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಪ್ರೇಮಾನಂದ ಶೆಟ್ಟಿ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಪೂಜಾ ಪೈ, ಸಂಜಯ ಪ್ರಭು ಮೋಹನ್ ರಾಜ್ ಮೊದಲಾದವರು ಉಪಸ್ಥಿತರಿದ್ದರು.