ಪಪುವಾ ನ್ಯೂ ಗಿನಿಯಾ: ಇಲ್ಲಿನ ಚಿನ್ನದ ಗಣಿಯೊಂದರ ಬಳಿ ಎರಡು ಬುಡಕಟ್ಟು ಜನಾಂಗಗಳ ನಡುವೆ ಭುಗಿಲೆದ್ದಿರುವ ಭಾರಿ ಘರ್ಷಣೆಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. ನೂರಾರು ಮಹಿಳೆಯರು, ಬಾಲಕಿಯರು, ವೃದ್ಧರು ಮತ್ತು ಬಾಲಕರು ಘರ್ಷಣೆಯಿಂದ ಪಾರಾಗಲು ಇಲ್ಲಿಂದ ಪಲಾಯನ ಮಾಡಿದ್ದಾರೆ ಎಂದು ವರದಿಗಳು ಸೋಮವಾರ ತಿಳಿಸಿವೆ.
ದೇಶದ ಅತಿದೊಡ್ಡ ಚಿನ್ನದ ನಿಕ್ಷೇಪಗಳಲ್ಲಿ ಒಂದಾದ ಎಂಗಾ ಪ್ರಾಂತ್ಯದ ಪೊರ್ಗೆರಾ ಕಣಿವೆಯಲ್ಲಿ ಕಳೆದ ವಾರ ಅಕ್ರಮ ಗಣಿಗಾರರ ಎರಡು ಬಣಗಳ ಮಧ್ಯೆ ಜಗಳವಾಡಿಕೊಂಡಿವೆ. ಒಂದು ಬಣದವರು ಮತ್ತೊಂದು ಬಣದ ಇಬ್ಬರು ವ್ಯಕ್ತಿಗಳನ್ನು ಕೊಂದ ನಂತರ ಹೋರಾಟ ಭುಗಿಲೆದ್ದಿತು ಎಂದು ಸ್ಥಳೀಯ ಪತ್ರಿಕೆ ಪೋಸ್ಟ್ - ಕೊರಿಯರ್ ಅನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇಬ್ಬರು ಸ್ಥಳೀಯ ಗಣಿ ಕಾರ್ಮಿಕರು ಸೇರಿದಂತೆ ಸುಮಾರು 20 ಜನ ಸಾವನ್ನಪ್ಪಿದ್ದಾರೆ ಮತ್ತು ದಿನ ಕಳೆದಂತೆ ಈ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಪೋಸ್ಟ್-ಕೊರಿಯರ್ ವರದಿ ಮಾಡಿದೆ. ಪೊರ್ಗೆರಾದಲ್ಲಿ 5,000 ಕ್ಕೂ ಹೆಚ್ಚು ಜನರು ಸಾಮೂಹಿಕ ಪಲಾಯನ ಮಾಡಿದ್ದಾರೆ.
ಹೆಚ್ಚುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಂದಾಗಿ ಪೊರ್ಗೆರಾದಲ್ಲಿ ಮೂಲಸೌಕರ್ಯ ಮತ್ತು ನಿವಾಸಿಗಳನ್ನು ರಕ್ಷಿಸಲು ಪೊಲೀಸ್ ಆಯುಕ್ತ ಡೇವಿಡ್ ಮ್ಯಾನಿಂಗ್ ತುರ್ತು ಆದೇಶಗಳನ್ನು ಘೋಷಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆ ದಿ ನ್ಯಾಷನಲ್ ವರದಿ ಮಾಡಿದೆ. ಪೊರ್ಗೆರಾ ಗಣಿ ಸೇರಿದಂತೆ ಪ್ರಮುಖ ಮೂಲಸೌಕರ್ಯಗಳನ್ನು ರಕ್ಷಿಸುವ ಸಲುವಾಗಿ ಹೋರಾಟಗಾರರನ್ನು ಇಲ್ಲಿಂದ ಹೊರಹಾಕಲು ಪೊಲೀಸರು ಬಲಪ್ರಯೋಗ ಮಾಡಲಿದ್ದಾರೆ ಎಂದು ಮ್ಯಾನಿಂಗ್ ಹೇಳಿದರು.