ಬಂಟ್ವಾಳ : ಹಿಂದೂ ಸಂಘಟನೆ ಮುಖಂಡ ಶರಣ್ ಪಂಪ್ವೆಲ್ ಹೆಸರು ಉಲ್ಲೇಖಿಸಿ, ಸಾಮಾಜಿಕ ಜಾಲತಾಣದ ಮೂಲಕ ವಾಯ್ಸ್ ಮೆಸೇಜ್ ಹರಿಯಬಿಟ್ಟ ಆರೋಪದ ಮೇಲೆ ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಬ್ಬದ ಮೆರವಣಿಗೆ ತಡೆಯುವಂತೆ ಸವಾಲೆಸೆದಿರುವ ಆಡಿಯೋ ವೈರಲ್ ಆಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಕುರಿತು ಹಿಂದೂಪರ ಸಂಘಟನೆಗಳಿಂದ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ನೀಡಲಾಗಿದ್ದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್, ಪಂಪ್ವೆಲ್ ಬಗ್ಗೆ ಆಡಿಯೋ ಮೂಲಕ ಬೆದರಿಕೆ ಹಾಕಿದ್ದಾಗಿ ದೂರಲಾಗಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು.
ಶರಣ್ ಪಂಪ್ವೆಲ್ ಅವರ ಹೆಸರು ಉಲ್ಲೇಖಿಸಿ ಸಾಮಾಜಿಕ ಜಾಲತಾಣದ ಮೂಲಕ ವಾಯ್ಸ್ ಮೆಸೇಜ್ ಹರಿಯಬಿಟ್ಟ ಮಹಮ್ಮದ್ ಶರೀಫ್ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತಿನ್ ಕುಮಾರ್ಗೆ ತಿಳಿಸಿದ್ದಾರೆ. ಬಂಟ್ವಾಳದಲ್ಲಿ ಶಾಂತಿ ಕದಡಲು ಕಾಂಗ್ರೆಸ್ ಕಾರ್ಯಕರ್ತ, ಮಾಜಿ ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್ ಯತ್ನಿಸಿದ್ದಾರೆ ಎಂದು ರಾಜೇಶ್ ನಾಯ್ಕ್ ಆರೋಪಿಸಿದ್ದಾರೆ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳುವಂತೆ ಎಸ್ಪಿಗೆ ತಿಳಿಸಿರುವುದಾಗಿ ಶಾಸಕ ರಾಜೇಶ್ ನಾಯ್ಕ್ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.