ಬೆಂಗಳೂರು: "ನಾಗಮಂಗಲ ಘರ್ಷಣೆ ಸಂಬಂಧ ಬಿಜೆಪಿಯ ಸತ್ಯಶೋಧನಾ ಸಮಿತಿ ವರದಿಯಲ್ಲಿ ಸತ್ಯ ಇದ್ದರೆ ಗಮನಿಸುತ್ತೇವೆ" ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಬಿಜೆಪಿ ಸತ್ಯಶೋಧನಾ ಸಮಿತಿ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, "ಮಾಡಲಿ, ಬಿಡಲಿ. ಅವರು ಸತ್ಯಶೋಧನೆ ಮಾಡಿ ತಿಳಿಸಲಿ. ನಮಗೂ ಗೊತ್ತಾಗುತ್ತದೆ. ಸತ್ಯಶೋಧನೆಯಲ್ಲಿ ಸತ್ಯ ಇದ್ರೆ ಗಮನಿಸುತ್ತೇವೆ. ನಮ್ಮ ಪೊಲೀಸರಿಗೂ ಸುಲಭವಾಗುತ್ತದೆ" ಎಂದರು.
ನಾಗಮಂಗಲ ಗದ್ದಲ ಕುರಿತು ಮಾತನಾಡಿ, "ಸದ್ಯಕ್ಕೆ ಶಾಂತಿಯುತವಾಗಿದೆ. ಶಾಂತಿ ಸಭೆ ನಡೆಸಲು ಸೂಚನೆ ಕೊಟ್ಟಿದ್ದೇನೆ. ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚನೆ ಕೊಟ್ಟಿದ್ದೇನೆ. ಹೆಚ್ಚಿನ ಪೊಲೀಸ್ ಭದ್ರತೆ ಹಾಕಲಾಗಿದೆ" ಎಂದರು.