ಮೈಸೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಿಂಗಳೀಕಗಳ ಸಂತಾನೋತ್ಪತ್ತಿ ಯಶಸ್ವಿಯಾಗಿದೆ. ಮೈಸೂರಿನ ಕೂರ್ಗಳ್ಳಿಯ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಅಳಿವಿನಂಚಿನ ಸಿಂಗಳೀಕ (ಸಿಂಹಬಾಲದ ಕೋತಿ) ಮರಿ ಜನಿಸಿದೆ. ಎರಡು ತಿಂಗಳ ಹಿಂದೆ ಮರಿ ಹುಟ್ಟಿದ್ದು, ಇವುಗಳ ಸಂಖ್ಯೆ ನಾಲ್ಕೇರಿದೆ. ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ತಳಿ ಅಭಿವೃದ್ಧಿ ಯೋಜನೆಯಡಿ 2015 ರಿಂದ ಸಿಂಗಳೀಕಗಳ ತಳಿ ಸಂರಕ್ಷಣೆ, ಅಭಿವೃದ್ಧಿಗೆ ನಿರಂತರ ಪ್ರಯತ್ನ ನಡೆದಿತ್ತು. ಸಿಂಗಳೀಕ ಮರಿ ಜನನವಾಗಿರುವುದರಿಂದ, ಅಳವಿಂಚಿನಲ್ಲಿರುವ ಪ್ರಾಣಿಗಳ ತಳಿ ಸಂರಕ್ಷಣೆಗೆ ಶಕ್ತಿ ನೀಡಿದಂತಾಗಿದೆ. ಎರಡು ಗಂಡು ಹಾಗೂ ಒಂದು ಸಿಂಗಳೀಕ ಇತ್ತು, ಮರಿ ಜನಿಸಿದ ನಂತರ ನಾಲ್ಕಕ್ಕೇ ಏರಿದೆ.
ಜೀವವೈವಿಧ್ಯದ ಸಮತೋಲನ ಕಾಯ್ದುಕೊಳ್ಳಲು ಅಳಿವಿನಂಚಿನ ಪ್ರಾಣಿಗಳ ಸಂರಕ್ಷಣೆಗಾಗಿ ಮೃಗಾಲಯಗಳಲ್ಲಿ ತಳಿ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿ ಕಾಡಿಗೆ ಬಿಡುವ ಯೋಜನೆ ಇದಾಗಿದ್ದು, ಕೇಂದ್ರಿಯ ಮೃಗಾಲಯ ಪ್ರಾಧಿಕಾರ ಯಾವ ತಳಿ ಅಭಿವೃದ್ಧಿ ಪಡಿಸಬೇಕೆಂದು ಮೃಗಾಲಯಗಳಿಗೆ ನಿರ್ದೇಶನ ನೀಡುತ್ತದೆ. ಅದರಂತೆ ತಳಿಗಳನ್ನು ಮೃಗಾಲಯಗಳು ಅಭಿವೃದ್ಧಿ ಪಡಿಸುತ್ತವೆ. ತಳಿ ಅಭಿವೃದ್ಧಿ ಕೇಂದ್ರಗಳು ಮೈಸೂರು, ಚೆನ್ನೈ ಸೇರಿದಂತೆ ದೇಶದ ನಾನಾ ಕಡೆ ಇವೆ.