ಮಂಗಳೂರು : ರಾಜಕೀಯ ವಿರೋಧಿಗಳಿಂದಲೂ ಮೆಚ್ಚುಗೆ ಪಡೆದಿದ್ದ ಆಸ್ಕರ್ ಫರ್ನಾಂಡೀಸ್ ಅಜಾತಶತ್ರುವಾಗಿದ್ದರು. ಅವರ ಜೀವನ ಮತ್ತು ರಾಜಕಾರಣ ಎಲ್ಲರಿಗೂ ಮಾದರಿ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆಸ್ಕರ್ ಫರ್ನಾಂಡೀಸ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆಸ್ಕರ್ ಫರ್ನಾಂಡೀಸ್ ಅವರ ಬಗ್ಗೆ ಹಲವು ವಿಚಾರಗಳನ್ನು ಸ್ಮರಿಸಿದರು.
ಆಸ್ಕರ್ ಫರ್ನಾಂಡೀಸ್ ರಾಜಕಾರಣದಲ್ಲಿ ಹಲವಾರು ಜನರನ್ನು ಕೈಹಿಡಿದು ಬೆಳೆಸಿದರು, ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಸ್ಥಾನಮಾನ ಕೊಡಿಸಿದರು, ಕಾಂಗ್ರೆಸ್ ಪಕ್ಷದ ಅಗ್ರಗಣ್ಯ ನಾಯಕರಾಗಿದ್ದುಕೊಂಡೇ ಅವರು ಕೆಳಮಟ್ಟದ ಸಾಮಾನ್ಯ ಕಾರ್ಯಕರ್ತರ ಜೊತೆ ಸಂಪರ್ಕ ಇಟ್ಟುಕೊಂಡಿದ್ದರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ತನ್ನ ಕುಟುಂಬದ ಸದಸ್ಯ ಎಂಬಂತೆ ಪ್ರೀತಿಸಿದ್ದರು, ಕಾಂಗ್ರೆಸ್ ಪಕ್ಷವನ್ನು ಅವರು ತಾಯಿಯಂತೆ ಪ್ರೀತಿಸುತ್ತಿದ್ದರು ಎಂದು ಹೇಳಿದರು.
ಅವರು ಯೋಗಾಸನ ಮತ್ತು ದೈಹಿಕ ಕಸರತ್ತುಗಳ ಮೂಲಕ ದೇಹವನ್ನು ಆರೋಗ್ಯವಾಗಿಟ್ಟುಕೊಂಡಿದ್ದರು. ಅದೇ ರೀತಿಯಲ್ಲಿ ರಾಜಕಾರಣದಲ್ಲೂ ಶುದ್ಧಹಸ್ತರಾಗಿದ್ದರು, ಅವರ ಜೀವನ ಮತ್ತು ರಾಜಕಾರಣ ಮಾದರಿಯೋಗ್ಯ ಎಂದರು.ಆಸ್ಕರ್ ಫರ್ನಾಂಡೀಸ್ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಈ ದೇಶಕ್ಕೆ ನೀಡಿರುವ ಕೊಡುಗೆಗಳು ಅಜರಾಮರವಾಗಿದ್ದು, ಅವರು ದೈಹಿಕವಾಗಿ ನಮ್ಮ ಜೊತೆ ಇಲ್ಲದಿದ್ದರೂ ಅವರ ಕೊಡುಗೆಗಳು ಸದಾ ಸ್ಮರಿಸಲ್ಪಡುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆಸ್ಪರ್ ಫರ್ನಾಂಡೀಸ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಎಐಸಿಸಿ ಕಾರ್ಯದರ್ಶಿ ಪಿ ಮೋಹನ್, ಕೆಪಿಸಿಸಿ ಸದಸ್ಯರಾದ ಪಿಯೂಸ್ ಎಲ್ ರೋಡ್ರಿಗಸ್ ಮತ್ತು ಪೃಥ್ವಿರಾಜ್, ಗೇರುಬೀಜ ಅಭಿವೃಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆನ್ ಪಿಂಟೋ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶುಬೋದ್ ಆಳ್ವ, ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಸೇರಿ ಹಲವು ಮಂದಿ ಉಪಸ್ಥಿತರಿದ್ದರು.