ಶ್ರೀನಗರ : ಉಗ್ರರ ದಾಳಿಗಳಿಂದ ಕುಖ್ಯಾತಿ ಹೊಂದಿದ್ದ ಜಮ್ಮು ಮತ್ತು ಕಾಶ್ಮೀರ ನಿಧಾನಕ್ಕೆ ಇತರ ಚಟುವಟಿಕೆಗಳತ್ತ ಹೊರಳುತ್ತಿದೆ. ಈಚೆಗೆ ಜಿ20 ಶೃಂಗದ ಸಭೆಗಳು ಅಲ್ಲಿ ನಡೆದಿದ್ದವು. ಇದೀಗ ಬರೋಬ್ಬರಿ 40 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಯೊಂದನ್ನು ಆಯೋಜಿಸಲು ಸಜ್ಜಾಗಿದೆ.
ಸೆಪ್ಟೆಂಬರ್ 20 ರಿಂದ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್ಎಲ್ಸಿ) ಮೂರನೇ ಸೀಸನ್ ಆರಂಭವಾಗಲಿದ್ದು, ಅದರ ಅಂತಿಮ ಚರಣದ ಪಂದ್ಯಗಳು ಕಣಿವೆ ರಾಜ್ಯದಲ್ಲಿ ನಡೆಯಲಿವೆ. ಅಕ್ಟೋಬರ್ 9 ರಿಂದ ಅಕ್ಟೋಬರ್ 16ರ ವರೆಗೆ ಕ್ವಾಲಿಫೈಯರ್, ಸೆಮಿಫೈನಲ್ ಮತ್ತು ಫೈನಲ್ ಸೇರಿ 7 ಪಂದ್ಯಗಳು ಶ್ರೀನಗರದ ಬಕ್ಷಿ ಕ್ರೀಡಾಂಗಣದಲ್ಲಿ ಜರುಗಲಿವೆ. ಯೂನಿವರ್ಸ್ ಬಾಸ್ ಕ್ರಿಸ್ಗೇಲ್, ಭಾರತದ ಲೆಜೆಂಡರಿ ಕ್ರಿಕೆಟಿಗರಾದ ಶಿಖರ್ ಧವನ್, ದಿನೇಶ್ ಕಾರ್ತಿಕ್ ಸುರೇಶ್ ರೈನಾ ಸೇರಿದಂತೆ ಹಲವರ ಆಟವನ್ನು ನೋಡಬಹುದಾಗಿದ್ದು, ಈ ಬಗ್ಗೆ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ ಎಲ್‌ಎಲ್‌ಸಿಯ ಸಹ ಸಂಸ್ಥಾಪಕ ರಮಣ್ ರಹೇಜಾ, ಸುಮಾರು ನಾಲ್ಕು ದಶಕಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಯೊಂದು ಕಾಶ್ಮೀರದಲ್ಲಿ ನಡೆಯಲಿದೆ. ಶ್ರೀನಗರದ ಬಕ್ಷಿ ಕ್ರೀಡಾಂಗಣವು ಇದಕ್ಕೆ ಸಾಕ್ಷಿಯಾಗಲಿದೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್ (LLC) ಪಂದ್ಯಾವಳಿಯ ಅಂತಿಮ ಪಂದ್ಯಗಳನ್ನು ಇಲ್ಲಿ ಆಯೋಜಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆಗಳು ಇಲ್ಲಿಗೆ ಬರಲಿದ್ದಾರೆ ಎಂದರು.
ಎಲ್‌ಎಲ್‌ಸಿಯ ಮೂರನೇ ಋತುವಿನಲ್ಲಿ ಪಾಕಿಸ್ತಾನದ ಕ್ರಿಕೆಟಿಗರನ್ನು ಹೊರತುಪಡಿಸಿ 30 ದೇಶಗಳ ಸುಮಾರು 124 ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ಶ್ರೀಲಂಕಾದ ಉಪುಲ್ ತರಂಗ, ತಿಲಕರತ್ನೆ ದಿಲ್ಶನ್, ಭಾರತದ ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಇಂಗ್ಲೆಂಡ್ನ ಇಯಾನ್ ಬೆಲ್ ಮತ್ತಿತರರು ಭಾಗವಹಿಸುವ ನಿರೀಕ್ಷೆಯಿದೆ. ಪಂದ್ಯಾವಳಿಯನ್ನು ಪ್ರಮುಖ ನಾಲ್ಕು ನಗರಗಳಲ್ಲಿ ನಡೆಸಲಾಗುತ್ತಿದೆ. ಒಟ್ಟು 25 ಪಂದ್ಯಗಳು ಇರಲಿವೆ. ಅಕ್ಟೋಬರ್ 16 ರಂದು ಶ್ರೀನಗರದ ಬಕ್ಷಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ ಎಂದು ವಿವರಿಸಿದರು.