ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಗುರುವಾರ ಹೊಸ್ತಾರೋಗಣೆ (ನವಾನ್ನ ಪ್ರಸಾದ ) ಮತ್ತು ಕದಿರು ಕಟ್ಟುವ ಕಾರ್ಯಗಳು ವಿವಿಧ ವಿಶೇಷ ಪೂಜಾ ವಿಧಿ ವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು.
ದೇಗುಲದ ಪ್ರಧಾನ ಅರ್ಚಕರು ಸುಬ್ರಹ್ಮಣ್ಯ ದೇವರ ಮೂಲ ವಿಗ್ರಹಕ್ಕೆ ಪಂಚಾಮೃತ ಮಹಾಭಿಷೇಕ ನೆರವೇರಿಸಿದರು. ಅಭಿಷೇಕದ ಬಳಿಕ ದರ್ಪಣತೀರ್ಥ ನದಿ ತೀರಕ್ಕೆ ತೆರಳಿ, ನದಿ ತಟದಲ್ಲಿ ಭತ್ತದ ತೆನೆಗೆ ಅರ್ಚಕರು ವಿಶೇಷ ಪೂಜೆ ಮಾಡಿದ ನಂತರ ಭತ್ತದ ತೆನೆಯ ಕಟ್ಟನ್ನು ದೀವಟಿಗೆ, ಬ್ಯಾಂಡ್, ವಾದ್ಯದಳೊಂದಿಗೆ, ದೇಗುಲದ ಆನೆ ಮೊದಲುಗೊಂಡು, ಮಂತ್ರಘೋಷದೊಂದಿಗೆ ಮೆರವಣಿಗೆಯಲ್ಲಿ ದೇಗುಲಕ್ಕೆ ತರಲಾಯಿತು.
ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ತೆನೆಯನ್ನು ಗರ್ಭಗುಡಿಗೆ ಕೊಂಡೊಯ್ದು ದೇವರ ಸನ್ನಿಧಿಯಲ್ಲಿ ಕದಿರು ಪೂಜೆ ನೆರವೇರಿಸಿದರು. ಮೊದಲು ದೇವರ ಗರ್ಭಗುಡಿಗೆ ಕದಿರನ್ನು ಕಟ್ಟಿ, ನಂತರ ದೇವಸ್ಥಾನದ ಪರಿವಾರ ಗುಡಿಗಳಿಗೆ, ದೇವಳದ ವಿವಿಧ ಭಾಗಗಳಿಗೆ, ರಥಗಳಿಗೆ, ಕಚೇರಿಗೆ ಕದಿರು ಕಟ್ಟಲು ತೆನೆ ವಿತರಿಸಲಾಯಿತು. ಸ್ಥಳದಲ್ಲಿದ್ದ ಭಕ್ತರಿಗೂ ಕದಿರು ವಿತರಿಸಲಾಯಿತು. ಹೊಸ್ತಾರೋಗಣೆಯ ಪ್ರಯುಕ್ತ ದೇವರಿಗೆ ಗರ್ಭಗುಡಿಯ ಎದುರಿನ ಮಂಟಪದಲ್ಲಿ ಪಂಚಾಮೃತ ಮಹಾಭಿಷೇಕ, ವಿಶೇಷ ಪೂಜೆ ಹಾಗೂ ನವಾನ್ನ ನೈವೇದ್ಯವನ್ನು ಸರ್ಮಪಿಸಲಾಯಿತು.
ಈ ಸಂದರ್ಭದಲ್ಲಿ ದೇಗುಲದ ಅಧಿಕಾರಿಗಳು, ಆಡಳಿತ ಸಮಿತಿ ಪದಾಧಿಕಾರಿಗಳು, ದೇಗುಲದ ಸಿಬ್ಬಂದಿ ಹಾಗು ಭಕ್ತರು ಉಪಸ್ಧಿತರಿದ್ದರು.