ಮಂಗಳೂರು : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ತುಳು ಪಠ್ಯವನ್ನು ಬೋಧಿಸುವ ತುಳು ಶಿಕ್ಷಕರ 2023 ನೇ ಸಾಲಿನ ಗೌರವ ಧನ 10 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ .
ತುಳು ಅಕಾಡೆಮಿಯ ವಾರ್ಷಿಕ ಕಾರ್ಯಕ್ರಮಗಳ ಅನುದಾನದಿಂದ ಈ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ತಿಳಿಸಿದ್ದಾರೆ. ತುಳು ಶಿಕ್ಷಕರ ಗೌರವಧನ ಬಿಡುಗಡೆಗೆ ಅನುಮೋದನೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಹಾಗೂ ಇಲಾಖೆಯ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಅವರಿಗೆ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
2010ರಲ್ಲಿ ತುಳು ಪಠ್ಯ ಐಚ್ಛಿಕ ವಿಷಯವಾಗಿ ಸೇರ್ಪಡೆಗೊಂಡಿತ್ತು. ಪ್ರಸ್ತುತ ರಾಜ್ಯ ಪಠ್ಯಕ್ರಮದ ಅನ್ವಯ ನಡೆಯುವ 33 ಶಾಲೆಗಳಲ್ಲಿ ತುಳು ಪಠ್ಯ ಬೋಧಿಸಲಾಗುತ್ತಿದೆ. ಕಳೆದ ಬಾರಿ 681 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ತರಗತಿಯಲ್ಲಿ ಐಚ್ಛಿಕ ಭಾಷೆಯಾಗಿ ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆದು ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು, ಈ ಪೈಕಿ 320 ವಿದ್ಯಾರ್ಥಿಗಳು ತುಳು ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದರು. ನೂರಕ್ಕೆ ನೂರು ಅಂಕಗಳನ್ನು ಪಡೆದ ಎಲ್ಲಾ 320 ವಿದ್ಯಾರ್ಥಿಗಳಿಗೂ ತಲಾ ಒಂದು ಸಾವಿರದಂತೆ ನಗದು ಬಹುಮಾನ ನೀಡಿ ತುಳುಭವನದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪುರಸ್ಕರಿಸಲಾಗಿತ್ತು ಎಂದು ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.