ನವದೆಹಲಿ: ರಷ್ಯಾ-ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಚರ್ಚೆ ನಡೆಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಈ ವಾರ ಮಾಸ್ಕೋಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಜುಲೈನಲ್ಲಿ ರಷ್ಯಾಗೆ ಮತ್ತು ಆಗಸ್ಟ್ನಲ್ಲಿ ಉಕ್ರೇನ್ಗೆ ಭೇಟಿ ನೀಡಿದ್ದರು. ತಮ್ಮ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ಮತ್ತು ವೊಲೊಡಿಮಿರ್ ಜೆಲೆನ್ ಸ್ಕಿ ಅವರೊಂದಿಗೆ ಮೋದಿ ಸಭೆ ನಡೆಸಿದ್ದರು.
ಅಧ್ಯಕ್ಷ ಜೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿ ಉಕ್ರೇನ್ ಭೇಟಿಯ ನಂತರ ಮರಳಿದ್ದ ಪ್ರಧಾನಿ ಮೋದಿ ಆಗಸ್ಟ್ 27 ರಂದು ಅಧ್ಯಕ್ಷ ಪುಟಿನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು. ಉಕ್ರೇನ್ ಭೇಟಿಯ ಬಗ್ಗೆ ಪ್ರಧಾನಿ ಮೋದಿ ಅಧ್ಯಕ್ಷ ಪುಟಿನ್ ಅವರಿಗೆ ಮಾಹಿತಿ ನೀಡಿದರು ಮತ್ತು ರಾಜಕೀಯ ಮತ್ತು ರಾಜತಾಂತ್ರಿಕ ವಿಧಾನಗಳ ಮೂಲಕ ಶಾಂತಿ ಸಂಧಾನವನ್ನು ಜಾರಿಗೊಳಿಸುವ ಭಾರತದ ಬದ್ಧತೆಯನ್ನು ಪ್ರಧಾನಿ ತಿಳಿಸಿದರು ಎಂದು ರಷ್ಯಾದ ರಾಯಭಾರ ಕಚೇರಿಯ ಹೇಳಿಕೆ ತಿಳಿಸಿತ್ತು.
ಎನ್ಎಸ್ಎ ದೋವಲ್ ಶಾಂತಿ ಮಾತುಕತೆಗಳಿಗಾಗಿ ಮಾಸ್ಕೋಗೆ ಪ್ರಯಾಣಿಸುವ ಬಗ್ಗೆ ಇದೇ ದೂರವಾಣಿ ಕರೆಯ ಸಮಯದಲ್ಲಿ ಇಬ್ಬರೂ ನಾಯಕರು ನಿರ್ಧರಿಸಿದ್ದರು ಎಂದು ಮೂಲಗಳು ತಿಳಿಸಿವೆ.
ದೂರವಾಣಿ ಕರೆಯಲ್ಲಿ, "ಉಕ್ರೇನ್ ಸರ್ಕಾರ ಮತ್ತು ಅದರ ಬೆಂಬಲಕ್ಕೆ ನಿಂತಿರುವ ಪಾಶ್ಚಿಮಾತ್ಯ ರಾಷ್ಟ್ರಗಳ ವಿನಾಶಕಾರಿ ನೀತಿಗಳ ಬಗ್ಗೆ ತಮ್ಮ ತಾತ್ವಿಕ ಮೌಲ್ಯಮಾಪನವನ್ನು ಪುಟಿನ್ ಹಂಚಿಕೊಂಡರು ಮತ್ತು ಈ ಸಂಘರ್ಷವನ್ನು ಪರಿಹರಿಸಲು ರಷ್ಯಾದ ಷರತ್ತುಗಳ ಬಗ್ಗೆ ಪ್ರಧಾನಿ ಮೋದಿಗೆ ಮಾಹಿತಿ ನೀಡಿದರು" ಎಂದು ರಷ್ಯಾದ ರಾಯಭಾರ ಕಚೇರಿ ತಿಳಿಸಿದೆ.
ಸಂಘರ್ಷದ ತ್ವರಿತ, ಶಾಶ್ವತ ಮತ್ತು ಶಾಂತಿಯುತ ಪರಿಹಾರವನ್ನು ಬೆಂಬಲಿಸುವ ಭಾರತದ ದೃಢ ಬದ್ಧತೆಯನ್ನು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪುನರುಚ್ಚರಿಸಿದರು.
ಈ ವಾರ ನಡೆಯಲಿರುವ ಬ್ರಿಕ್ಸ್ ಎನ್ಎಸ್ಎ ಸಭೆಯಲ್ಲಿ ಕೂಡ ಅಜಿತ್ ದೋವಲ್ ಭಾಗವಹಿಸಲಿದ್ದಾರೆ. ಕಜಾನ್ನಲ್ಲಿ ನಡೆಯಲಿರುವ ವಾರ್ಷಿಕ ಬ್ರಿಕ್ಸ್ ಶೃಂಗಸಭೆಗೂ ಮುನ್ನ ಈ ಸಭೆ ನಡೆಯುತ್ತಿದೆ.
ಬ್ರಿಕ್ಸ್ ಎನ್ಎಸ್ಎ ಸಭೆಯಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ಉನ್ನತ ಭದ್ರತಾ ಅಧಿಕಾರಿಗಳು ಮಾತ್ರವಲ್ಲದೆ ಬ್ರಿಕ್ಸ್ನ ಹೊಸ ಸದಸ್ಯ ರಾಷ್ಟ್ರಗಳಾದ ಸೌದಿ ಅರೇಬಿಯಾ, ಯುಎಇ, ಇರಾನ್, ಈಜಿಪ್ಟ್ ಮತ್ತು ಇಥಿಯೋಪಿಯಾಗಳ ಅಧಿಕಾರಿಗಳೂ ಬಾಗವಹಿಸಲಿದ್ದಾರೆ. ದೋವಲ್ ಅವರು ಚೀನಾದ ಎನ್ಎಸ್ಎ ವಾಂಗ್ ಯಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆಯಿದೆ.