image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜ್ಯದ ವಿವಿಧೆಡೆ 8 ಜನ ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ

ರಾಜ್ಯದ ವಿವಿಧೆಡೆ 8 ಜನ ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ

ಶಿವಮೊಗ್ಗ: ರಾಜ್ಯದ ವಿವಿಧೆಡೆ 8 ಜನ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತಲೂ ಅಧಿಕ ಗಳಿಕೆ, ಭ್ರಷ್ಟಾಚಾರ ಸೇರಿದಂತೆ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಆನೇಕಲ್, ಗದಗ, ಧಾರವಾಡ, ಕಲಬುರಗಿ ಹಾಗೂ ಬೆಳಗಾವಿಯ ವಿವಿಧೆಡೆ ಶೋಧ ಕಾರ್ಯ ಮುಂದುವರೆದಿದೆ ಎಂದು ಲೋಕಾಯುಕ್ತ ಮೂಲಗಳು ಮಾಹಿತಿ ನೀಡಿವೆ.

ದಾಳಿಗೊಳಗಾದ ಅಧಿಕಾರಿಗಳು ಬಿಬಿಎಂಪಿ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಕಾಶ್, ಶಿವಮೊಗ್ಗದ ಸಾವಯವ ಕೃಷಿ ವಿಭಾಗದ ಸಹ ಸಂಶೋಧನ ನಿರ್ದೇಶಕ ಡಾ.ಎಸ್.ಪ್ರದೀಪ್, ಚಿಕ್ಕಮಗಳೂರು ಪಟ್ಟಣ ಪುರಸಭೆ ಲೆಕ್ಕಾಧಿಕಾರಿ ಲತಾ ಮಣಿ, ಆನೇಕಲ್ ಪಟ್ಟಣ ಪುರಸಭೆಯ ಮುಖ್ಯಾಧಿಕಾರಿ ಕೆ.ಜಿ.ಅಮರನಾಥ್, ಗದಗ ಪಟ್ಟಣ ಪೊಲೀಸ್ ನಿರೀಕ್ಷಕರು ಧೃವರಾಜ್, ಧಾರವಾಡ ಮಲಪ್ರಭಾ ಪ್ರಾಜೆಕ್ಟ್ ಇಂಜಿನಿಯರ್ ಅಶೋಕ್ ವಲ್ಸಂದ್, ಕಲ್ಬುರ್ಗಿಯ ಆರ್‌ಡಿಪಿಆರ್ ಮಾಜಿ ಎಂಜಿನಿಯರ್ ಮಲ್ಲಿಕಾರ್ಜುನ, ಅಲಿಪುರ ಕಲ್ಬುರ್ಗಿ ಪಿಡಿಒ ರಾಮಚಂದ್ರ. ಸಾಗರ ತಾಲೂಕು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಪ್ರದೀಪ್ ಎಂಬವರ ಮನೆ ಮೇಲೆ ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಶಿವಮೊಗ್ಗ ನಗರದ ಪ್ರಿಯಾಂಕ‌ ಲೇಔಟ್‌ನಲ್ಲಿನ ಅವರ ವಾಸದ ಮನೆ ಮೇಲೆ ಬೆಳಗ್ಗೆ ದಾಳಿ ನಡೆದಿದೆ. ಇದರ ಜೊತೆಗೆ ಇವರು ಆಸ್ತಿ ಹೊಂದಿರುವ ಶಿಕಾರಿಪುರ ತಾಲೂಕು ಭದ್ರಾಪುರ ಗ್ರಾಮದ ತೋಟದ ಮನೆ ಹಾಗೂ ಹೊಸನಗರ ತಾಲೂಕಿನ ತೋಟದ ಮನೆ ಮೇಲೂ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.‌ ಶಿವಮೊಗ್ಗ ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ನೇತೃತ್ವದಲ್ಲಿ ಶೋಧ ನಡೆಯುತ್ತಿದೆ. ಹಚ್ಚಿನ ಮಾಹಿತಿಯನ್ನು ದಾಳಿ ಪೂರ್ಣಗೊಂಡ ನಂತರ ತಿಳಿಸಲಾಗುವುದು ಎಂದು ಚೌಧರಿ ತಿಳಿಸಿದ್ದಾರೆ. ಧಾರವಾಡದ ಮಲಪ್ರಭ ಪ್ರಾಜೆಕ್ಟ್ ಇಂಜಿನಿಯರ್ ಅಶೋಕ ವಲ್ಸಂದ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ನಗರದ ಕೆವಿಜಿ ಬ್ಯಾಂಕ್ ಬಳಿ ಇರುವ ಕ್ವಾರ್ಟರ್ಸ್, ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಅಶೋಕ ಅವರಿಗೆ ಸೇರಿದ್ದೆನ್ನಲಾದ ಬೆಳಗಾವಿ, ಬಾಗಲಕೋಟೆ, ಜಮಖಂಡಿ ಮತ್ತು ಜಕನೂರಿನ ಮನೆ ಮೇಲೂ ಲೋಕಾ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಲೋಕಾಯುಕ್ತ ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Category
ಕರಾವಳಿ ತರಂಗಿಣಿ