ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷವನ್ನು ತಡೆಗಟ್ಟಲು 'ಸ್ಪೆಷಲ್ ಆಕ್ಷನ್ ' (Special Action Force) ಎಂಬ ತಂಡವೊಂದು ಸಿದ್ದವಾಗಿದ್ದು, ಇಂದು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ನೂತನ ಸ್ಪೆಷಲ್ ಅ್ಯಕ್ಷನ್ ಫೋರ್ಸ್‌ಗೆ ಚಾಲನೆ ನೀಡಿದರು.ಕೋಮುದಳ್ಳುರಿಗೆ ಆಗಾಗ ಸಿಲುಕುವ ದಕ್ಷಿಣ ಕನ್ನಡ ಜಿಲ್ಲೆಗೆ ರಾಜ್ಯ ಸರ್ಕಾರ ಕೊನೆಗೂ ಕೊಟ್ಟ ಮಾತಿನಂತೆ ಹೊಸ ತಂಡವನ್ನು ಹುಟ್ಟುಹಾಕಿದೆ. ಸ್ಪೆಷಲ್ ಆಕ್ಷನ್ ಫೋರ್ಸ್ ಇಂದಿನಿಂದ ಅಸ್ತಿತ್ವಕ್ಕೆ ಬರಲಿದ್ದು, ಕಿಡಿಗೇಡಿಗಳ ಹುಟ್ಟಡಗಲಿಸಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಫೋರ್ಸ್ ಕಾರ್ಯಾಚರಿಸಲಿರುವ ಈ ತಂಡ ಡಿಐಜಿ ದರ್ಜೆ ಅಧಿಕಾರಿ ನೇತೃತ್ವದಲ್ಲಿ ಕಾರ್ಯ ನಿರ್ವಹಿಸಲಿದ್ದು, 248 ಸಿಬ್ಬಂದಿ ಒಳಗೊಂಡ ಮೂರು ಕಂಪನಿ ಕಾರ್ಯಾಚರಣೆಗೆ ಸಿದ್ಧವಾಗಿದೆ. ಪ್ರತಿ ಕಂಪನಿಯಲ್ಲಿ 80 ಸಿಬ್ಬಂದಿ ಇರಲಿದ್ದಾರೆ.
ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಹೆಗಲಿಗೆ ಈ ವಿಶೇಷ ಕಾರ್ಯ ಪಡೆಯ ಹೆಚ್ಚುವರಿ ಹೊಣೆ ಇರಲಿದೆ. ಮಂಗಳೂರು ನಗರ ಕೇಂದ್ರದಲ್ಲಿಯೇ ಎಸ್‌ಎಎಫ್ ಕಾರ್ಯಪಡೆಯ ಕೇಂದ್ರ ಕಚೇರಿ ಇರಲಿದೆ. ನಕ್ಸಲ್ ನಿಗ್ರಹ ಪಡೆಯಲ್ಲಿದ್ದ 656 ಸಿಬ್ಬಂದಿಗಳ ಪೈಕಿ 248 ಮಂದಿ ಈ ಹೊಸ ಪಡೆಗೆ ನಿಯೋಜನೆ ಮಾಡಲಾಗಿದೆ.
ಡಿಐಜಿ, ಡಿವೈಎಸ್ಪಿ, ಸಹಾಯಕ ಕಮಾಂಡೆಂಟ್, 4 ಇನ್ ಸ್ಪೆಕ್ಟರ್, 16 ಪಿಎಸ್‌ಐ ಸೇರಿದಂತೆ ಒಟ್ಟು 248 ಸಿಬ್ಬಂದಿ ತಂಡದಲ್ಲಿದ್ದಾರೆ. ಈ ತಂಡ ಸಂಭಾವ್ಯ ಕೋಮು ಹಿಂಸಾಚಾರ, ಕೋಮು ಗಲಭೆಯ ಸಂಚು, ಮೂಲಭೂತವಾದಿ ಚಟುವಟಿಕೆ ನಿಗ್ರಹ ಸೇರಿದಂತೆ ಗುಪ್ತ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಲಿದೆ. ಆ ಮೂಲಕ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುವ ಚಟುವಟುಕೆಗಳ ಮೇಲೂ SAF ತೀವ್ರ ನಿಗಾ ಇಡಲಿದೆ.
SAF ಉದ್ಘಾಟಿಸಿದ ಬಳಿಕ ಮಾತನಾಡಿದ ಗೃಹ ಸಚಿವ ಡಾ.ಪರಮೇಶ್ವರ್, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗದಲ್ಲಿ ಎಸ್‌ಎಎಫ್ ಅಗತ್ಯವಿದೆ. ಮುಂದಕ್ಕೆ ಅಗತ್ಯ ಬಿದ್ದರೆ ಇದನ್ನು ಇಡೀ ರಾಜ್ಯಕ್ಕೆ ವಿಸ್ತರಿಸುತ್ತೇವೆ. ಈಗ ಅದರ ಅಗತ್ಯ ಇಲ್ಲ. ಈ ಕಾರ್ಯಪಡೆಗೆ ಅನೇಕರು ಟೀಕೆ ಮಾಡಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಇದ್ರೆ ರಾಜ್ಯದಲ್ಲಿ ಶಾಂತಿ ಇರುತ್ತೆ. ಈ ಕಾರ್ಯಪಡೆ ಕೆಲಸಕ್ಕೆ ಜಿಲ್ಲೆಯ ಜನರು ಸಹಕಾರ ನೀಡಬೇಕು. ಯಾರೂ ಇದೇ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಲ್ಲ. ಇದನ್ನೇ ದೊಡ್ಡದು ಮಾಡಿ ವಿಭಜನೆ ಮಾಡುವುದು ಸರಿಯಲ್ಲ. ಅಗತ್ಯವಿದ್ದರೆ ಇಡೀ ರಾಜ್ಯದಲ್ಲಿ ಈ ಕಾರ್ಯಪಡೆ ಸ್ಥಾಪನೆ ಮಾಡುತ್ತೇವೆ ಎಂದು ಹೇಳಿದ್ದಾರೆ.