ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಲೆಗಳನ್ನು ನಿಯಂತ್ರಿಸಲಾಗದ ರಾಜ್ಯ ಸರಕಾರದ ವಿರುದ್ಧ ಆಕ್ರೋಶಿತರಾದ ಕಾರ್ಯಕರ್ತರ ಆಕ್ರೋಶಕ್ಕೆ ಮಣಿದ ದ.ಕ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರು ಸಾಮೂಹಿಕ ರಾಜೀನಾಮೆ ಘೋಷಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಕೊಲೆಗಳು ನಡೆಯುತ್ತಿದ್ದು, ಇದಕ್ಕೆ ಕಾರಣವಾದ ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಯಾವುದೇ ಕ್ರಮ ಜರಗಿಸದೇ ಇರುವುದು ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಆದ್ದರಿಂದ ಇಂದು ಮಧ್ಯಾಹ್ನ ಮಂಗಳೂರಿನ ಶಾದಿಮಹಲ್‌ನಲ್ಲಿ ಕಾಂಗ್ರೆಸ್ ಪಕ್ಷದ ಮುಸ್ಲಿಂ ಮುಖಂಡರುಗಳ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮುಹಮ್ಮದ್, ಮಾಜಿ ಮನಪಾ ವಿಪಕ್ಷ ನಾಯಕ ರವೂಫ್, ಮಾಜಿ ಮೇಯರ್ ಅಶ್ರಫ್, ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಮುಸ್ಲಿಂ ಸಮುದಾಯದ ಪ್ರಮುಖರು ಭಾಗಿಯಾಗಿದ್ದರು.
ಸಭೆಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಅವರು ಮಾತನಾಡಿ, ಸದ್ಯದ ದ.ಕ.ಜಿಲ್ಲೆಯ ಪರಿಸ್ಥಿತಿಗೆ ಪೊಲೀಸ್ ಇಲಾಖೆಯೇ ಕಾರಣ. ಸರಕಾರವೂ ಪೊಲೀಸ್ ಇಲಾಖೆಗೆ ಬಿಸಿ ಮುಟ್ಟಿಸುವಲ್ಲಿ ಸೋತಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ನಾಯಕರು ರಾಜಿನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದೆವು. ಆದರೆ ರಾಜೀನಾಮೆಗೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ, ಜಮೀರ್ ಅಹ್ಮದ್ ಅವರು ಇಂದು ಬೆಳಗ್ಗೆ ಮಾತನಾಡಿ ತಾವು ಯಾರೂ ರಾಜೀನಾಮೆ ನೀಡಬಾರದು. ಒಂದು ವಾರದಲ್ಲಿ ಬದಲಾವಣೆ ತರುತ್ತೇವೆ ಎಂದು ಭರವಸೆ ನೀಡಿದ್ದಾರೆ. ಈ ವೇಳೆ ಸಭೆಯಲ್ಲಿ ಗದ್ದಲವೆದ್ದು, ಸಾಮೂಹಿಕ ರಾಜೀನಾಮೆ ನೀಡಲು ಬಂದ ಕಾರ್ಯಕರ್ತರು ಕೋಲಾಹಲ ಎಬ್ಬಿಸಿದ್ದಾರೆ.
ಈ ತಕ್ಷಣ ಎಲ್ಲರೂ ರಾಜಿನಾಮೆ ಕೊಡಲೇ ಬೇಕು ಎಂದು ಸಭಾಂಗಣದ ಮುಂದೆ ಬಂದು ಆಕ್ರೋಶ ವ್ಯಕ್ತಪಡಿಸಿದರು. ನಾಯಕರು ನಾವು ರಾಜೀನಾಮೆ ನೀಡುತ್ತೇವೆ ಎಂದರೂ ಅದನ್ನು ಕೇಳಿಸಿಕೊಳ್ಳದೆ ರಾಜೀನಾಮೆ ನೀಡಲೇಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ಮುಖಂಡರುಗಳು ತಾವು ರಾಜೀನಾಮೆ ನೀಡುವುದಾಗಿ ಘೋಷಿಸಿದರು.