image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹೆದ್ದಾರಿ ಪ್ರಾಧಿಕಾರಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಖಡಕ್ ಸೂಚನೆ : ಮಾಣಿ ಉಪ್ಪಿನಂಗಡಿ ಅಂಡರ್ ಪಾಸ್ ಹಾಗೂ ಕಲ್ಲಡ್ಕ ಫ್ಲೈಓವರ್‌ ಒಂದು ಭಾಗ ವಾಹನ ಸಂಚಾರಕ್ಕೆ ಮುಕ್ತ...

ಹೆದ್ದಾರಿ ಪ್ರಾಧಿಕಾರಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಖಡಕ್ ಸೂಚನೆ : ಮಾಣಿ ಉಪ್ಪಿನಂಗಡಿ ಅಂಡರ್ ಪಾಸ್ ಹಾಗೂ ಕಲ್ಲಡ್ಕ ಫ್ಲೈಓವರ್‌ ಒಂದು ಭಾಗ ವಾಹನ ಸಂಚಾರಕ್ಕೆ ಮುಕ್ತ...

 ಮಂಗಳೂರು: ನಿರೀಕ್ಷೆಗೂ ಮೊದಲೇ ಮಳೆಗಾಲ ಪ್ರಾರಂಭವಾಗಿದ್ದು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ ರೋಡ್‌-ಅಡ್ಡಹೊಳೆ  ಚತುಷ್ಪಥ ಕಾಮಗಾರಿ ಅಂತಿಮ ಹಂತದ ಪ್ರಗತಿಯಲ್ಲಿರುವ ಕಾರಣ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಲ್ಲಡ್ಕ ಫ್ಲೈಓವರ್‌ ಸೇರಿದಂತೆ ಕೆಲವೆಡೆ ವಾಹನಗಳ ಸುಗಮ ಸಂಚಾರಕ್ಕೆ ರಸ್ತೆಯನ್ನು ತೆರವುಗೊಳಿಸಿ ಅನುಕೂಲ ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿರುವುದಾಗಿ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಹೇಳಿದ್ದಾರೆ.

ಮುಂಗಾರು ಚುರುಕುಗೊಂಡಿರುವ ಕಾರಣ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಬಿ.ಸಿ.ರೋಡ್‌-ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿಯಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿ-ಆತಂಕ ಎದುರಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಈ ಹಿನ್ನಲೆಯಲ್ಲಿ ಎಲ್ಲೆಲ್ಲಿ ಕಾಮಗಾರಿಯಿಂದ ವಾಹನಗಳ ಸಂಚಾರಕ್ಕೆ ತೊಂದರೆ ಎದುರಾಗಿದೆಯೋ ಅಲ್ಲೆಲ್ಲ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ ಜನರ ಓಡಾಟಕ್ಕೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಕ್ಯಾ. ಚೌಟ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

ಇಂದಿನಿಂದ ಹೆದ್ದಾರಿ ಪ್ರಾಧಿಕಾರವು ಮಾಣಿ ಬಳಿಯ ವೆಹಿಕಲ್ ಅಂಡರ್ ಪಾಸ್(ವಿಯುಪಿ)  ಹಾಗೂ ಉಪ್ಪಿನಂಗಡಿ ಬಳಿಯ ವೆಹಿಕಲ್ ಅಂಡರ್ ಪಾಸ್  ದ್ವಿ ಪಥವನ್ನು ಸಂಚಾರಕ್ಕೆ ಮುಕ್ತಗೊಳಿಸಿದೆ. ಅಲ್ಲದೆ, ಜೂ. 2ರಿಂದ ಕಲ್ಲಡ್ಕ ಪೇಟೆಯಲ್ಲಿರುವ ಮೇಲುರಸ್ತೆ(ಫ್ಲೈಓವರ್‌)ಯಲ್ಲಿ ಎಡಭಾಗವನ್ನು ವಾಹನಗಳ ಸಂಚಾರಕ್ಕೆ ತೆರವುಗೊಳಿಸಲಾಗುತ್ತದೆ. ಇನ್ನು ತುಂಬೆಯಲ್ಲಿ ನೀರು ನಿಲ್ಲುವ ಸಮಸ್ಯೆ ಪರಿಹರಿಸುವಂತೆಯೂ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗಿತ್ತು. ಇದಕ್ಕೆ ಪರಿಹಾರವಾಗಿ ಎನ್.ಹೆಚ್.ಎ.ಐ  ಪೈಪ್ ಕಲ್ವರ್ಟ್ ಅಳವಡಿಸಿದ್ದು, ಕಾಮಗಾರಿ ಪೂರ್ಣಗೊಂಡರೆ ಇಲ್ಲಿಯೂ ಮಳೆಗಾಲದಲ್ಲಿ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಆ ಮೂಲಕ, ಕಾಮಗಾರಿ ಪ್ರಗತಿಯಲ್ಲಿರುವ ಜಿಲ್ಲೆಯ ಎಲ್ಲ ಹೆದ್ದಾರಿಗಳಲ್ಲಿಯೂ ಮಳೆಗಾಲದ ಸಮಸ್ಯೆಯಿಂದ ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮದ ಜತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಕ್ಕೆ ಸೂಚಿಸಿರುವುದಾಗಿ ಕ್ಯಾ. ಚೌಟ ಹೇಳಿದ್ದಾರೆ.

ಅಡ್ಡಹೊಳೆಯಿಂದ ಪೆರಿಯಶಾಂತಿವರೆಗಿನ 15.130 ಕಿ.ಮೀ.ಗಳ ಪೈಕಿ 14.4 ಕಿ.ಮೀ.ಗಳ ಚತುಷ್ಪಥದ ಕಾಮಗಾರಿ ಪೂರ್ಣಗೊಂಡಿದೆ. ಹಾಗೆಯೇ, ಪೆರಿಯಶಾಂತಿಯಿಂದ ಬಂಟ್ವಾಳದವರೆಗಿನ 48.485 ಕಿ.ಮೀ.ಗಳ ಪೈಕಿ 41.52 ಕಿ.ಮೀ.ಗಳ ಚತುಷ್ಪಥ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ