ಕಾರವಾರ: 5ನೇ ಶತಮಾನದ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತೀಯ ನೌಕಾಪಡೆ ನಿರ್ಮಾಣ ಮಾಡಿರುವ ಐಎನ್ಎಸ್ವಿ ಕೌಂಡಿನ್ಯ ಹೆಸರಿನ ಹಡಗನ್ನು ಕಾರವಾರದ ಕದಂಬ ನೌಕಾನೆಲೆಯಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಅಜಂತಾ ವರ್ಣಚಿತ್ರದಿಂದ ಸ್ಫೂರ್ತಿ ಪಡೆದು ನೌಕಾಪಡೆ ಈ ಹಡಗನ್ನು ನಿರ್ಮಾಣ ಮಾಡಿದೆ. ಐದನೇ ಶತಮಾನದಲ್ಲಿ ಈ ತಂತ್ರಜ್ಞಾನದಲ್ಲಿ ತಯಾರಿಸುತ್ತಿದ್ದ ಹಡಗನ್ನು ವ್ಯಾಪಾರಕ್ಕಾಗಿ ಬಳಸಲಾಗುತ್ತಿತ್ತು. ಯಾವುದೇ ಲೋಹ ಬಳಸದೇ ಕೇವಲ ತೆಂಗಿನ ನಾರು, ಮರದ ಹಲಗೆ ಇತರೆ ನೈಸರ್ಗಿಕ ವಸ್ತುಗಳನ್ನು ಬಳಸಿ ನಿರ್ಮಿಸಲಾಗುತ್ತಿತ್ತು. ಅಂತಹ ಹಡಗನ್ನು ಇದೀಗ ಭಾರತೀಯ ನೌಕಾಪಡೆ ನಿರ್ಮಾಣ ಮಾಡಿ ಕಾರವಾರದ ಕದಂಬ ನೌಕಾನೆಲೆಯಲ್ಲಿ ಲೋಕಾರ್ಪಣೆಗೊಳಿಸಿದೆ.
ಪ್ರಾಚೀನ ಭಾರತೀಯರು ಕಬ್ಬಿಣದ ಲಭ್ಯತೆಯ ಹೊರತಾಗಿಯೂ ಹಡಗುಗಳನ್ನು ಹೊಲಿಯುವ ತಂತ್ರಜ್ಞಾನ ಬಳಸುತ್ತಿದ್ದರು. ಇದೇ ಮಾದರಿಯಲ್ಲಿ ಐಎನ್ಎಸ್ವಿ ಕೌಂಡಿನ್ಯ ಹಡಗು ನಿರ್ಮಾಣಕ್ಕೆ ಕೇಂದ್ರ ಸಂಸ್ಕೃತಿ ಸಚಿವಾಲಯ, ಭಾರತೀಯ ನೌಕಾಪಡೆ ಮತ್ತು ಗೋವಾ ಹೋಡಿ ಇನ್ನೋವೇಷನ್ಸ್ ನಡುವೆ 2023ರಲ್ಲಿ ತ್ರಿಪಕ್ಷೀಯ ಒಪ್ಪಂದವಾಗಿತ್ತು. ಅದರಂತೆ ಹಡಗನ್ನು ಗೋವಾ ಶಿಪ್ ಯಾರ್ಡ್ನಲ್ಲಿ ಸಂಪೂರ್ಣ ಸಾಂಪ್ರದಾಯಿಕ ವಿಧಾನದಿಂದ ಕಚ್ಚಾವಸ್ತುಗಳನ್ನು ಬಳಸಿ ಕೇರಳ ಮೂಲದ ಬಾಬು ಶಂಕರ್ ನೇತೃತ್ವದ ಕುಶಲಕರ್ಮಿಗಳ ತಂಡ ಈ ಹಡಗನ್ನು ನಿರ್ಮಿಸಿದೆ.
"ಈ ಹಡಗಿನಲ್ಲಿ ಮರದ ಹಲಗೆಗಳು, ದಿಮ್ಮಿಗಳನ್ನು ಬಳಸಿ ನೇಯ್ಗೆ ಮಾಡಲಾಗಿದೆ. ತೆಂಗಿನ ಮರದ ನಾರುಗಳನ್ನು ಬಳಕೆ ಮಾಡಲಾಗಿದೆ. ಹಾಯಿಗಳು ಹಾಗು ಸಾಂಪ್ರದಾಯಿಕ ಸ್ಟೇರಿಂಗ್ ರೂಪಿಸಲಾಗಿದೆ. ಇದನ್ನು ಪ್ರಸ್ತುತ ವಿಶ್ವದಲ್ಲಿ ಇರುವ ಹಡಗುಗಳಿಗಿಂತ ಭಿನ್ನವಾಗಿ ನಿರ್ಮಿಸಲಾಗಿದೆ" ಎಂದು ಹಡಗು ನಿರ್ಮಾಣ ಮಾಡಿರುವ ಬಾಬು ಶಂಕರ್ ಮಾಹಿತಿ ನೀಡಿದರು. ಇನ್ನು ಐದನೇ ಶತಮಾನದಲ್ಲಿ ಹಡಗನ್ನು ಹೇಗೆ ನಿರ್ಮಾಣ ಮಾಡುತ್ತಿದ್ದರೋ ಅದೇ ಮಾದರಿಯಲ್ಲಿ ಹಡಗನ್ನು ನಿರ್ಮಾಣ ಮಾಡಿದ್ದು, ಹಿಂದಿನ ಕಾಲದ ಹಡಗಿನ ನೆನಪನ್ನು ಮತ್ತೆ ಕಣ್ಣಮುಂದೆ ತರಲಾಗಿದೆ. ಹಡಗನ್ನು ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಬುಧವಾರ ಕಾರವಾರದ ಐಎನ್ಎಸ್ ನೌಕಾನೆಲೆಯಲ್ಲಿ ಲೋಕಾರ್ಪಣೆಗೊಳಿಸಿದರು.
ಇನ್ನು ಇದೇ ವೇಳೆ ಮಾತನಾಡಿದ ಅವರು, "ವಿಕಸಿತ ಭಾರತದ ಪರಿಕಲ್ಪನೆಯಲ್ಲಿ ಭಾರತವು ತನ್ನ ವೈಭವದ ಭೂತಕಾಲ ಮತ್ತು ಇತಿಹಾಸದೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಅಭಿವೃದ್ಧಿಯತ್ತ ನಡೆದಿದೆ. ಭಾರತವು ಅದ್ಭುತವಾದ ಇತಿಹಾಸ ಹೊಂದಿದ್ದು, ಸಾವಿರಾರು ವರ್ಷಗಳ ಕಾಲ ಇಲ್ಲಿನ ಸಂಪತ್ತು, ಜ್ಞಾನ, ವಿಜ್ಞಾನ ಜಗತ್ತಿಗೆ ಆಕರ್ಷಣೀಯ ಕೇಂದ್ರವಾಗಿತ್ತು. ಭಾರತದ ಬಗ್ಗೆ ತಿಳಿದುಕೊಳ್ಳಲು, ನೋಡಲು, ಭಾರತದಿಂದ ಕಲಿಯಲು ವಿಶ್ವದ ಅನೇಕ ಜನರು ಬಂದರು. ಸಾವಿರಾರು ವರ್ಷಗಳ ದಾಳಿಗಳ ಹೊರತಾಗಿಯೂ ನಮ್ಮ ಶ್ರೇಷ್ಠ ಸಂಸ್ಕೃತಿ ಕೊನೆಗೊಂಡಿಲ್ಲ. ಇದು ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುವ ಸಂಗತಿ" ಎಂದರು.