ನವದೆಹಲಿ: ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ವಿರುದ್ಧ ಪಾಕಿಸ್ತಾನ ನಡೆಸಿದ ದಾಳಿಯನ್ನು ತಡೆಯುವಲ್ಲಿ ನಮ್ಮ ವಾಯು ರಕ್ಷಣಾ ವ್ಯವಸ್ಥೆಯು ಅತ್ಯಂತ ನಿಖರವಾಗಿ ಕೆಲಸ ಮಾಡಿದೆ. ಪಾಕಿಸ್ತಾನವು 800-1000 ಡ್ರೋನ್, ಕ್ಷಿಪಣಿಗಳನ್ನು ಭಾರತದ ಮೇಲೆ ಹಾರಿಸಿತ್ತು ಎಂದು ಲೆಫ್ಟಿನೆಂಟ್ ಜನರಲ್ ಸುಮರ್ ಇವಾನ್ ಡಿ ಕುನ್ಹಾ ಅವರು ಹೇಳಿದರು. ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಮತ್ತು ಭಾರತದ ಸಂಘರ್ಷದ ಬಗ್ಗೆ ಮಾತನಾಡಿರುವ ಅವರು, ಪಾಕಿಸ್ತಾನದಿಂದ ಬಂದ ಡ್ರೋನ್‌ಗಳನ್ನು ತಟಸ್ಥಗೊಳಿಸುವಲ್ಲಿ ನಮ್ಮ ವಾಯು ರಕ್ಷಣಾ ಬಂದೂಕು ವ್ಯವಸ್ಥೆಗಳು ನಿರ್ಣಾಯಕ ಪಾತ್ರ ವಹಿಸಿವೆ. ಅವುಗಳ ಕಾರ್ಯಕ್ಷಮತೆಯು ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಅವರು ಬಣ್ಣಿಸಿದರು.
ಪಾಕಿಸ್ತಾನವನ್ನು ಎದುರಿಸಲು ಭಾರತವು ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಸೇನಾ ಕೇಂದ್ರ ಕಚೇರಿ ಇರುವ ರಾವಲ್ಪಿಂಡಿಯಿಂದ ಖೈಬರ್ ಪಖ್ತುಂಖ್ವಾದವರೆಗೆ ಮಾತ್ರ ಪಾಕಿಸ್ತಾನವು ವ್ಯಾಪ್ತಿ ಹೊಂದಿದೆ. ಇಷ್ಟು ಪ್ರದೇಶದ ಮೇಲೆ ಭಾರತ ನಿಯಂತ್ರಣ ಸಾಧಿಸಲು ಸಮರ್ಥವಾಗಿದೆ ಎಂದು ಅವರು ಹೇಳಿದರು. ಜುಲೈನಲ್ಲಿ ಹೊಸ ಪೀಳಿಗೆಯ ಗನ್ ಸಿಸ್ಟಂಗಳ ಪ್ರಯೋಗ ನಡೆಯಲಿದೆ. ಈ ವ್ಯವಸ್ಥೆಯು ಆಧುನಿಕ ವಾಯು ರಕ್ಷಣೆಯಲ್ಲಿ ಮಹತ್ವ ಪಾತ್ರ ವಹಿಸುತ್ತದೆ. ನಮ್ಮಲ್ಲಿರುವ ಎಲ್-70, ಝ, ಶಿಲ್ಕಾ, ಎಸಿಎಸಿ, ಎಲ್‌ಎಂಜಿ , ಎಂಎಂಜಿ ಬಂದೂಕು ಮಾದರಿಗಳು ಶತ್ರುಗಳ ಡ್ರೋನ್‌ಗಳನ್ನು ನಾಶ ಮಾಡುವಷ್ಟು ಸಶಕ್ತವಾಗಿವೆ ಎಂದು ಅವರು ಮಾಹಿತಿ ನೀಡಿದರು. ಇವನ್ನೇ ಬಳಸಿಕೊಂಡು ಪಾಕಿಸ್ತಾನದ ಶೇಕಡಾ 60 ರಷ್ಟು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದರು.
ಭಾರತದ ಜೊತೆಗಿನ ಸಂಘರ್ಷದ ನಾಲ್ಕು ದಿನಗಳಲ್ಲಿ ಪಾಕಿಸ್ತಾನವು ಪಶ್ಚಿಮ ಗಡಿಯಲ್ಲಿ ದೊಡ್ಡ, ಸಣ್ಣ ಮತ್ತು ಮಧ್ಯಮ ಗಾತ್ರದ 800 ರಿಂದ 1000 ಡ್ರೋನ್ಗಳ ದಾಳಿ ಮಾಡಿದೆ. ಇವೆಲ್ಲವೂ ನಾಗರಿಕರನ್ನು ಗುರಿಯಾಗಿಸಿಕೊಂಡು ಮಾಡಲಾಗಿತ್ತು. ಮಾನವರಹಿತ ಯುದ್ಧ ವೈಮಾನಿಕ ಡ್ರೋನ್‌ಗಳನ್ನು ನಮ್ಮ ವಾಯು ರಕ್ಷಣಾ ವ್ಯವಸ್ಥೆಯು ಹೊಡೆದು ಹಾಕಿದ್ದರಿಂದ ಯಾವುದೇ ನಾಗರಿಕ ಸಾವುನೋವುಗಳು ಸಂಭವಿಸಲಿಲ್ಲ ಎಂದು ಅವರು ತಿಳಿಸಿದರು. ಗಡಿ ಭಾಗದಲ್ಲಿನ ನಗರ ಪ್ರದೇಶಗಳು ಮತ್ತು ನಾಗರಿಕರ ರಕ್ಷಿಸುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಮಿಲಿಟರಿ ಮತ್ತು ವಿವಿಐಪಿ ವಲಯಗಳನ್ನು ಮಾತ್ರವಲ್ಲದೆ ಜನಸಂಖ್ಯಾ ಕೇಂದ್ರಗಳನ್ನೂ, ವಿಶೇಷವಾಗಿ ಗಡಿಗಳ ಸಮೀಪವಿರುವ ಪ್ರದೇಶಗಳನ್ನು ರಕ್ಷಿಸಲು ಭಾರತದ ವಾಯು ರಕ್ಷಣಾ ಕಾರ್ಯತಂತ್ರವನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವನ್ನು ಅವರು ಹೇಳಿದರು.
ನಾಗರಿಕ ಮೂಲಸೌಕರ್ಯವನ್ನು ವೈಮಾನಿಕ ಬೆದರಿಕೆಗಳಿಂದ ರಕ್ಷಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಯುಎಸ್ ಸಿ-ರಾಮ್ ವ್ಯವಸ್ಥೆ ಮತ್ತು ಇಸ್ರೇಲ್‌ನ ಐರನ್ ಡೋಮ್‌ನಂತಹ ಅಂತಾರಾಷ್ಟ್ರೀಯ ಮಾದರಿಗಳನ್ನು ನಾವು ಹೊಂದಬೇಕಿದೆ ಎಂದು ಅವರು ಹೇಳಿದರು. ಭಾರತವು ಈಗ ಸಂಪೂರ್ಣ ಸ್ವಯಂಚಾಲಿತ ವಾಯು ರಕ್ಷಣಾ ಕಮಾಂಡ್ ಮತ್ತು ನಿಯಂತ್ರಣ ಸಾಮರ್ಥ್ಯಗಳನ್ನು ಹೊಂದಿರುವ ರಾಷ್ಟ್ರಗಳ ಕ್ಲಬ್‌ಗೆ ಸೇರಿದೆಯೇ ಎಂದು ಕೇಳಿದಾಗ, ಅಗತ್ಯವಿರುವ ಕೆಲಸ ಪ್ರಗತಿಯಲ್ಲಿದೆ. ಪ್ರಸ್ತುತ ಸವಾಲನ್ನು ನಿಭಾಯಿಸುವಲ್ಲಿ ನಾವು ಯಶಸ್ವಿಯಾಗಿದ್ದರೂ, ನಮ್ಮ ರಕ್ಷಣಾ ವ್ಯವಸ್ಥೆಗಳ ಮೇಲೆ ನಾವು ಇನ್ನಷ್ಟು ಪ್ರಗತಿ ಸಾಧಿಸಬೇಕಿದೆ ಎಂದರು.