ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ದಕ್ಷಿಣ ಕನ್ನಡದ ಜನತೆಯು ಜಿಲ್ಲೆಗೆ ಕೋಮು ಹಣೆಪಟ್ಟಿ ಕಟ್ಟಿ ನೆಗೆಟಿವ್ ಅಪಪ್ರಚಾರ ಮಾಡುವುದನ್ನು ಕೊನೆಗಾಣಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಶಾಶ್ವತ ಕಾರ್ಯಯೋಜನೆಗಳನ್ನು ನಿರೀಕ್ಷೆ ಮಾಡುತ್ತಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ. ಅವರು
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರು ಪ್ರಸ್ತುತ ನಕಾರಾತ್ಮಕ ವಿಚಾರಕ್ಕೆ ರಾಷ್ಟ ಮಟ್ಟದಲ್ಲಿ ಸುದ್ದಿಯಾಗುವ ಸಂದಿಗ್ಧ ಸಂದರ್ಭದಲ್ಲಿ ದಕ್ಷಿಣ ಕನ್ನಡಕ್ಕೆ ಆಗಮಿಸುತ್ತಿರುವ ಸಿದ್ದರಾಮಯ್ಯನವರೂ ಗೃಹ ಸಚಿವರ ಹಾದಿಯನ್ನೇ ಅನುಸರಿಸುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ಬಳಿ ಉದ್ದೇಶಪೂರ್ವಕವಾಗಿ ಮಾತುಕತೆ ನಡೆಸದೆ , ಹೊಣೆಗಾರಿಕೆ ಇಲ್ಲದಂತೆ ʼಕೇವಲ ಬಂದ ಪುಟ್ಟ ಹೋದ ಪುಟ್ಟʼ ಎಂಬಂತೆ ಬಂದು ಹೋಗುತ್ತಿರುವುದು ಎಷ್ಟು ಸರಿ? ಹಾಗಾದರೆ ಕಾಂಗ್ರೆಸ್ ಪಕ್ಷ ಹೆದರುತ್ತಿರುವುದು ಯಾವುದಕ್ಕೆ? ಎಂದು ಸಂಸದರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ಸಿನ ರಾಜಕೀಯ ನಾಟಕದಲ್ಲಿ ಮಂಗಳೂರು ಕೇವಲ ಬಲಿಪಶುವೇ? ಮಂಗಳೂರು ಕೇವಲ ಕಾಂಗ್ರೆಸ್‌ನ ರಾಜಕೀಯ ದಾಳವೇ? ಹೂಡಿಕೆ, ಅಭಿವೃದ್ಧಿಯನ್ನು ಕುಂಠಿತಗೊಳಿಸಿ ಇಲ್ಲಿನ ಶಾಂತಿ ಕದಡಿ, ಚುನಾವಣಾ ಲಾಭಕ್ಕಾಗಿ ’ಕಮ್ಯೂನಲ್" ಹಣೆಪಟ್ಟಿ ಹಚ್ಚಲು ಈ ಪ್ರದೇಶವನ್ನು ಬಳಸಲಾಗುತ್ತಿದೆಯೇ? ದಶಕಗಳಿಂದಲೂ ಮಂಗಳೂರು ಕೋಮು ಹಣೆಪಟ್ಟಿಯಿಂದ ನಲುಗಿ ಹೋಗಿದೆ. ಇದರಿಂದ ಸಾಮಾಜಿಕ, ಆರ್ಥಿಕ ಮತ್ತು ಅಭಿವೃದ್ದಿ ನಷ್ಟವಾಗಿದೆ. ರಾಜಕೀಯ ಪಕ್ಷಗಳು ನಮ್ಮ ನೆಲವನ್ನು ತಮ್ಮ ’ಪ್ರಯೋಗಾಲಯ’ವಾಗಿ ಬಳಸುವುದು ನಮಗೆ ಬೇಕಿಲ್ಲ. ಮಂಗಳೂರು ಕೇವಲ ಒಂದು ನಗರವಲ್ಲ, ಅದು ರಾಷ್ಟ್ರದ ರಕ್ಷಣೆಗೆ ನಿಂತಿರುವ ಕೋಟೆ. ಈ ಭದ್ರಕೋಟೆಯನ್ನು ರಾಜಕೀಯ ಉದ್ದೇಶಗಳಿಗಾಗಿ ಬ್ರಾಂಡ್ ಮಾಡಲು ಗಲಭೆ, ಉದ್ವಿಗ್ನತೆ, ಸೃಷ್ಟಿಲಾಗುತ್ತಿದೆ ಎಂದು ಕ್ಯಾ. ಚೌಟ ಖಡಕ್ ಆಗಿ ಹೇಳಿದ್ದಾರೆ.
ಕೋಮು-ಸಂಘರ್ಷಕ್ಕೆ ತುಪ್ಪ ಸುರಿದು ತಮ್ಮ ಬೇಳೆ ಬೇಯಿಸಿಕೊಳ್ಳುವುದೇ ಕಾಂಗ್ರೆಸ್ ಪಕ್ಷ ರಾಜಕೀಯ ತಂತ್ರಗಾರಿಕೆಯಾಗಿರದಿದ್ದರೆ, ಖುದ್ದು ಮುಖ್ಯಮಂತ್ರಿಗಳೇ ಈ ಭಾಗದ ಜನರ ಮುಂದೆ ಕುಳಿತು ಅವರ ನಿಜವಾದ ಸಮಸ್ಯೆಗಳನ್ನು ಆಲಿಸುವ ಧೈರ್ಯವನ್ನು ತೋರಿಸಲಿ. ಈ ಕರಾವಳಿ ಭಾಗದ ಬಹುವರ್ಷಗಳಿಂದ ಬಗೆಹರಿಯದೆ ಬಾಕಿಯಾಗಿರುವ ಬೇಡಿಕೆಗಳು-ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಹುಡುವ ಕಾರ್ಯಯೋಜನೆಗಳನ್ನು ರೂಪಿಸಲಿ. ಅದುಬಿಟ್ಟು ಇಲ್ಲಿಗೆ ಬಂದು ಬರೀ ತುಷ್ಟೀಕರಣದ ಭಾಷಣ ಬಿಗಿದು ಒಂದೇ ಮತೀಯರ ಓಲೈಗೆ ರಾಜಕಾರಣಕ್ಕೆ ಯತ್ನಿಸುವುದು ಬೇಡ ಎಂದು ಕಿವಿಮಾತು ಹೇಳಿದ್ದಾರೆ
ಕಾಂಗ್ರೆಸ್ ಪಕ್ಷವು ದಶಕಗಳಿಂದ ಕರಾವಳಿಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಕೋಮು ಎನ್ನುವ ನೆಗೆಟಿವ್ ಬ್ರಾಂಡಿಂಗ್‌ನ್ನು ಮಾಡುತ್ತಿರುವುದನ್ನು ನಾನು ಈ ಹಿಂದೆಯೂ ಉಲ್ಲೇಖಿಸಿದ್ದೇನೆ. ಈ ಕಾರಣಕ್ಕೆ ಕಾಂಗ್ರೆಸ್‌ನವರ ಸ್ವಾರ್ಥ ರಾಜಕೀಯ ಹಿತಾಸಕ್ತಿಗಳ ಮುಂದೆ ಕರಾವಳಿ ಭಾಗದ ಜನರ ನಿಜವಾದ ಆಸಕ್ತಿ, ಅವರ ಕುಂದು-ಕೊರತೆಗಳು ಮಹತ್ವ ಕಳೆದುಕೊಂಡು ಮರೆಯಾಗಿ ಹೋಗುತ್ತಿವೆ ಎಂದು ಕ್ಯಾ. ಚೌಟ ಆರೋಪಿಸಿದ್ದಾರೆ.