ನವದೆಹಲಿ: ಆಪರೇಷನ್ ಸಿಂಧೂರ್ ಕುರಿತು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ನಾನು ನಮ್ಮ ಭದ್ರತಾ ಪಡೆಗಳನ್ನು ಅಭಿನಂದಿಸಲು ಮತ್ತು ವಂದಿಸಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.
ಪಹಲ್ಗಾಮ್ ದಾಳಿಯು ಭಯೋತ್ಪಾದನೆಯ ಅತ್ಯಂತ ಅನಾಗರಿಕ ಮುಖವಾಗಿತ್ತು. ಅದು ನನಗೆ ವೈಯಕ್ತಿಕ ನೋವಾಗಿತ್ತು ಎಂದಿರುವ ಪ್ರಧಾನಿ, ಭಯೋತ್ಪಾದಕರನ್ನು ಧೂಳಿಪಟ ಮಾಡಲು ನಾವು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದೇವೆ ಎಂದು ಘೋಷಿಸಿದರು. ನಮ್ಮ ಮಹಿಳೆಯರ ಹಣೆಯಿಂದ 'ಸಿಂಧೂರ್' ತೆಗೆದ ಪರಿಣಾಮಗಳನ್ನು ಶತ್ರುಗಳು ಈಗ ಅರಿತುಕೊಂಡಿದ್ದಾರೆ; ಆಪರೇಷನ್ ಸಿಂಧೂರ್ ಕೇವಲ ಹೆಸರಾಗಿರಲಿಲ್ಲ ಎಂದು ಭಾರತೀಯತೆಯ ಪ್ರತೀಕ ಎಂದರು.
ಮೇ 7 ರಂದು, ನಮ್ಮ ಸಂಕಲ್ಪ ಕಾರ್ಯರೂಪಕ್ಕೆ ಬಂದಿರುವುದನ್ನು ಇಡೀ ಜಗತ್ತು ನೋಡಿದೆ . ನಮ್ಮ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಪಾಕಿಸ್ತಾನದಲ್ಲಿ ಭಯೋತ್ಪಾದಕ ತಾಣಗಳನ್ನು ನಾಶಪಡಿಸಿದಾಗ, ಅವರ ಕಟ್ಟಡಗಳನ್ನು ಮಾತ್ರವಲ್ಲದೇ ಅವರ ಆತ್ಮವನ್ನೂ ಸಹ ಕೆಡವಲಾಯಿತು ಎಂದು ಪ್ರಧಾನಿ ತಿರುಗೇಟು ನೀಡಿದರು. 'ರಾಷ್ಟ್ರ ಮೊದಲು' ನಮ್ಮ ಸಂಕಲ್ಪವಾದಾಗ, ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಪ್ರಧಾನಿ ಮೋದಿ ಇದೇ ವೇಳೆ ಸ್ಪಷ್ಟಪಡಿಸಿದರು.
ಭಾರತೀಯ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯಾನಕ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಘೋಷಿಸಿದರು. ಭಯೋತ್ಪಾದಕ ಶಿಬಿರಗಳ ಮೇಲಿನ ನಮ್ಮ ದಾಳಿಯ ನಂತರ ಪಾಕಿಸ್ತಾನ ಕತ್ತಲೆ ಆವರಿಸಿತು. ಆದರೆ ಭಯೋತ್ಪಾದನೆಯ ವಿರುದ್ಧ ಹೋರಾಡಲು ಸಹಾಯ ಮಾಡುವ ಬದಲು ನಮ್ಮ ಮೇಲೆ ದಾಳಿ ಮಾಡಲು ಅವರು ಧೈರ್ಯ ಮಾಡಿದರು. ಇದಕ್ಕೆ ಭಾರತ ಮತ್ತೆ ಉತ್ತರ ನೀಡಿದೆ ಎಂದು ದಾಳಿಯ ವಿವರವನ್ನು ರಾಷ್ಟ್ರಕ್ಕೆ ನೀಡಿದರು.