ಮಂಗಳೂರು: ಕಾಮನ್ ವೆಲ್ತ್ ಸಂಸದೀಯ ಸಂಘದ ಅಖಿಲ ಭಾರತ ಮಟ್ಟದ ಸ್ಪೀಕರ್ ಗಳ ಸಮಾವೇಶವನ್ನು ಸೆಪ್ಟೆಂಬರ್ 8ರಿಂದ 10ರವರೆಗೆ ಬೆಂಗಳೂರಿನಲ್ಲಿ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. 24 ವರ್ಷಗಳ ಬಳಿಕ ಕರ್ನಾಟಕಕ್ಕೆ ಈ ಸಮ್ಮೇಳನದ ಆತಿಥ್ಯ ವಹಿಸುವ ಅವಕಾಶ ದೊರೆತಿದೆ. ಇದು ನನ್ನ ಅವದಿಯಲ್ಲಿ ನಡೆಯುತ್ತಿರುವುದು ನನಗೆ ಖುಷಿಯ ವಿಚಾರ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ. ಅವರು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಒಂದೆರಡು ಸ್ಥಳಗಳನ್ನು ಗುರುತಿಸಲಾಗಿದ್ದು, ಯಾವುದಾದರೂ ಒಂದು ಸ್ಥಳವನ್ನು ಸಮಾವೇಶಕ್ಕೆ ಆಯ್ಕೆ ಮಾಡಲಾಗುವುದು. ಸಪ್ಟೆಂಬರ್ 8ರಂದು ವಿಧಾನಸೌದದ ಗ್ರಾಂಡ್ ಸ್ಟೆಪ್ ನಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಉದ್ಘಾಟನೆ ನಡೆಯಲಿದೆ. ಉದ್ಘಾಟನೆ ಮತ್ತು ಸಮಾರೋಪ ಕಾರ್ಯಕ್ರಮಗಳಿಗೆ ಶಾಸಕರನ್ನು ಆಹ್ವಾನಿಸಲಾಗುವುದು. ನಂತರದ ಕಾರ್ಯಕ್ರಮಗಳಲ್ಲಿ ಆಹ್ವಾನಿತರು ಮಾತ್ರ ಭಾಗವಹಿಸುತ್ತಾರೆ ಎಂದು ಹೇಳಿದರು.ಸೆಪ್ಟೆಂಬರ್ 11ರಂದು, ಸಮ್ಮೇಳನದಲ್ಲಿ ಭಾಗವಹಿಸುವ ಸ್ಪೀಕರ್ ಗಳಿಗೆ ರಾಜ್ಯ ಪ್ರವಾಸಕ್ಕೆ ಕರೆದೊಯ್ಯಲು ಯೋಚಿಸಲಾಗಿದೆ. ಮೈಸೂರು, ಮಂಗಳೂರು ಹಾಗೂ ಬೇಲೂರು-ಹಳೆಬೀಡು ಈ ಮೂರು ಪ್ರವಾಸಿ ತಾಣಗಳಲ್ಲಿ ಯಾವುದಾದರೂ ಒಂದು ಸ್ಥಳವನ್ನು ಅಂತಿಮಗೊಳಿಸಲಾಗುವುದು ಎಂದರು.
ಸಮ್ಮೇಳನಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತಿದೆ. ವಿಧಾನಸಭೆ ಸ್ಪೀಕರ್ ಮತ್ತು ವಿಧಾನ ಪರಿಷತ್ ಸಭಾಪತಿ ನೇತೃತದಲ್ಲಿ ಸಮ್ಮೇಳನ ನಡೆಯಲಿದ್ದು, ದೇಶದ ಎಲ್ಲ ರಾಜ್ಯಗಳ ಸ್ಪೀಕರ್ ಹಾಗೂ ಉಪಸ್ಪೀಕರ್ ಗಳು, ವಿಧಾನ ಪರಿಷತ್ ನ ಸಭಾಪತಿ, ಉಪ ಸಭಾಪತಿಗಳು, ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಪ್ರಜಾಪ್ರಭುತ್ವ ಬಲಿಷ್ಠ ಗೊಳಿಸುವುದು, ಸ್ಪೀಕರ್ ಗಳ ಪಾತ್ರ ಸೇರಿದಂತೆ ಕೆಲವು ನಿರ್ದಿಷ್ಟ ವಿಷಯಗಳ ಮೇಲೆ ಸಮ್ಮೇಳನದಲ್ಲಿ ಚರ್ಚೆ ಆಗಲಿದೆ ಎಂದರು.