ಮಂಗಳೂರು: ನಗರದ ಪುರಾಣ ಪ್ರಸಿದ್ಧ ಕದ್ರಿ ಶ್ರೀಮಂಜುನಾಥೇಶ್ವರ ದೇವಾಲಯದಲ್ಲಿ ಇಂದು ಬೆಳಗ್ಗೆ ಯುವಕನೋರ್ವ ಭೈಕಿನಲ್ಲಿ ದೇವಸ್ಥಾನದ ಒಳ ಪ್ರವೇಶಿಸಿ ದಾಂಧಲೆ ನಡೆಸಿದ್ದಲ್ಲದೆ, ಅಣ್ಣಪ್ಪ ದೈವದ ಕಡ್ತಲೆ ಹಿಡಿದು ಹುಚ್ಚಾಟ ಮೆರೆದಿದ್ದಾನೆ. ಇದನ್ನು ಕಂಡ ಭಕ್ತರು ಒಂದು ಕ್ಷಣ ಧಿಗ್ಭ್ರಾಂತರಾಗಿದ್ದಾರೆ ಎನ್ನಲಾಗಿದೆ.ಮೊದಲಿಗೆ ಈತ ಬೈಕ್ ನಲ್ಲಿ ನೇರವಾಗಿ ಕದ್ರಿ ದೇವಸ್ಥಾನದ ಪ್ರಾಂಗಣ ಪ್ರವೇಶಿಸಿ, ಬಳಿಕ ದೇವಸ್ಥಾನದೊಳಗೆ ಪ್ರವೇಶಿಸಿ ರಂಪಾಟ ಮಾಡಿದ್ದಾನೆ. ನಂತರ ಅಣ್ಣಪ್ಪ ಸ್ವಾಮಿಯ ಗುಡಿಯ ಮುಂಭಾಗಕ್ಕೆ ತೆರಳಿ ಕಾಲಿನಿಂದ ಬಾಗಿಲು ಒದ್ದು, ಅಣ್ಣಪ್ಪ ದೈವದ ಕಡ್ತಲೆಯನ್ನು ಕೈಗೆತ್ತಿಕೊಂಡು ಹುಚ್ಚಾಟ ಮೆರೆದಿದ್ದಾನೆ. ಈ ಬಗ್ಗೆ ಪ್ರಶ್ನಿಸಿದ ಅರ್ಚಕರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.ಈ ವೇಳೆ ಸ್ಥಳದಲ್ಲಿದ್ದವರು ಯುವಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಇತನ ಹೆಸರು ಸುಧಾಕರ ಆಚಾರ್ಯ ಎನ್ನಲಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ.