ಮಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಯೊಬ್ಬನ ಕುಟುಂಬದ ಪರ ತನಿಖೆಗೆ ಮೊದಲೇ ಕ್ಲೀನ್ ಚಿಟ್ ಹೇಳಿಕೆ ನೀಡಿರುವ ಸ್ಪೀಕರ್ ಯು.ಟಿ. ಖಾದರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದ್ದಾರೆ.ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಹಾಸ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಯಾಕೆ ಅಷ್ಟೊಂದು ಕಾಳಜಿ? ತನಿಖೆ ವಿಚಾರದಲ್ಲಿ ಹೇಳಿಕೆ ಕೊಡಲು ಅವರು ಯಾರು ? ಉಸ್ತುವಾರಿ ಸಚಿವರೇ ? ಎಂದು ಪ್ರಶ್ನಿಸಿದರು.ಖಾದರ್ ಅವರದ್ದು ಒನ್ ಸೈಡ್ ವರ್ತನೆ. ಅವರು ಸ್ಪೀಕರ್ ಆಗಿರುವ ತನಕ ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ನ್ಯಾಯ ಸಿಗುವ ನಂಬಿಕೆ ಇಲ್ಲ. ಆದ್ದರಿಂದ ಅವರು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದರೆ ರಾಜ್ಯಪಾಲರೇ ಮಧ್ಯೆ ಪ್ರವೇಶಿಸಿ ಅವರ ರಾಜೀನಾಮೆ ಪಡೆಯಲಿ ಎಂದು ಆಗ್ರಹಿಸಿದರು.ಸ್ಪೀಕರ್ ಆದವರು ಅವರ ಜವಾಬ್ದಾರಿಯನ್ನು ನಿಭಾಯಿಸಬೇಕು. ಅದು ಬಿಟ್ಟು ಇಂತಹ ಹೇಳಿಕೆ ಕೊಟ್ಟದ್ದು ಯಾಕೆ? ಖಾದರ್ ಎರಡು ಬಾರಿ ಹೇಳಿಕೆ ಕೊಟ್ಟು ಯಾಕೆ ಸುಮ್ಮನಾಗಿದ್ದಾರೆ ಎಂದು ಪ್ರಶ್ನಿಸಿದರು
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಂಧಿತ 8 ಮಂದಿಯ ಪೈಕಿ ರಂಜಿತ್ ಮತ್ತು ನಾಗರಾಜ ಕಳಸದವರು. ಅವರು ಅಲ್ಲಿ ಹೋಟೆಲ್, ಹೋಮ್ ಸ್ಟೇ ಹೊಂದಿರುವ ಮುಹಮ್ಮದ್ ಮುಸ್ತಫ ಎಂಬವರ ಕೆಲಸದವರು. ಮುಸ್ತಫ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಯು.ಟಿ.ಖಾದರ್ ಮತ್ತು ಕಾಂಗ್ರೆಸ್ ಮುಖಂಡ ಇನಾಯತ್ ಅಲಿ ಪಾಲ್ಗೊಂಡಿದ್ದರು.
ಮುಸ್ತಫನ ಜೊತೆಗೆ ಕೊಲೆ ಪ್ರಕರಣದ ಇನ್ನೊಬ್ಬ ಆರೋಪಿ ಬಗ್ಗೆ ಶಾಂತಿಗುಡ್ಡೆಯ ನಿಯಾಝ್ ಮೀನು ವ್ಯಾಪಾರ ಮಾಡಿಕೊಂಡಿದ್ದನು. ಮುಸ್ತಫನ ಆಪ್ತರು ಕೊಲೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವಾಗ ಪೊಲೀಸರು ಆತನನ್ನು ಇನ್ನೂ ಯಾಕೆ ಬಂಧಿಸಿಲ್ಲ? ಕೊಲೆ ಪ್ರಕರಣದಲ್ಲಿ ಇನ್ನೂ ಹಲವು ಮಂದಿ ಶಾಮೀಲಾಗಿದ್ದಾರೆ. ಆದರೆ ಪೊಲೀಸರು 8 ಮಂದಿಯನ್ನು ಮಾತ್ರ ಬಂಧಿಸಿದ್ದಾರೆ. ಇದು ಇಷ್ಟಕ್ಕೆ ಸೀಮಿತವೇ ಎಂದು ಪ್ರಶ್ನಿಸಿದರು.ಹತ್ಯೆಗೂ ಮುನ್ನ ಡಿನ್ನರ್ ಪಾರ್ಟಿ ನಡೆದಿತ್ತು. ಇದರ ಆಯೋಜಕರು ಯಾರು? ಹತ್ಯೆಗೆ ಕಾರು, ಬೈಕ್, ಪಿಕ್‌ಅಪ್ ವಾಹನ ಒದಗಿಸಿದವರು ಯಾರು ಎಂಬ ವಿಚಾರದ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಮೇಯರ್ ಗಳಾದ ಸುಧೀರ್ ಕುಮಾರ್, ಪ್ರೇಮಾನಂದ ಶೆ ಮತ್ತಿತರರು ಉಪಸ್ಥಿತರಿದ್ದರು