ಮಂಗಳೂರು: ದಕ್ಷಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಕೊಲೆ ಪ್ರಕರಣದ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರು ಮಹತ್ವದ ಹೇಳಿಕೆ ನೀಡಿದ್ದಾರೆ. ಗೃಹ ಸಚಿವ ಪರಮೇಶ್ವರ್ ಜೊತೆ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ (Anupam Agarwal), ಘಟನೆ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದ್ದು, ಈ ಪೈಕಿ ಇಬ್ಬರು ಹಿಂದುಗಳು ಇರುವುದು ದೃಢಪಟ್ಟಿದೆ. ಈ ಹಿಂದೆ ಕೊಲೆಯಾಗಿದ್ದ ಫಾಜಿಲ್ ತಮ್ಮ ಆದಿಲ್ ಸುಹಾಸ್ ಶೆಟ್ಟಿ ಕೊಲೆಗೆ 5 ಲಕ್ಷ ಹಣ (Funding) ಮಾಡಿದ್ದಾನೆ. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 8 ಆರೋಪಿಗಳನ್ನು ಬಂಧಿಸಲಾಗಿದೆ. ಅಬ್ದುಲ್ ಸಫ್ಘಾನ್ (29), ನಿಯಾಜ್ (28), ಕಲಂದರ್ ಶಾಫಿ (31), ಮೊಹಮ್ಮದ್ ಮುಝಮ್ಮಿಲ್ (32), ರಂಜಿತ್ (19), ನಾಗರಾಜ್ (20), ಮೊಹಮ್ಮದ್ ರಿಜ್ವಾನ್ (28) ಮತ್ತು ಆದಿಲ್ ಮೆಹರೂಫ್ (ಫಾಜಿಲ್ ತಮ್ಮ) ಬಂದಿತರು.
ಅಬ್ದುಲ್ ಸಫ್ಘಾನ್ ಪ್ರಮುಖ ಆರೋಪಿ. 2023ರಲ್ಲಿ ಅಬ್ದುಲ್ ಸಫ್ಘಾನ್ ಮೇಲೆ ಮಾರಣಾಂತಿಕ ಹಲ್ಲೆ ಆಗಿತ್ತು. ಸಫಾನ್ಗೆ ಸುಹಾಸ್ ಶೆಟ್ಟಿ ಕೊಲೆ ಮಾಡುವ ಆತಂಕ ಇತ್ತು. ಹಾಗಾಗಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದು, ಅದಕ್ಕಾಗಿ ಫಾಜಿಲ್ ತಮ್ಮ ಆದಿಲ್ ಮೆಹರೂಫ್ ನನ್ನು ಸಂಪರ್ಕಿಸಿ ಕೊಲೆ ಮಾಡಲು ತೀರ್ಮಾನಿಸಿದ್ದರು.
ಸುಹಾಸ್ ಕೊಲೆ ಮಾಡಲು ಸಫ್ಘಾನ್ ತಂಡಕ್ಕೆ ಆದಿಲ್ 5 ಲಕ್ಷ ರೂ. ನೀಡಿದ್ದ. ನಂತರ ನಿಯಾಜ್ ಸ್ನೇಹಿತರಾದ ನಾಗರಾಜ್ ಮತ್ತು ರಂಜನ್ ಸಂಪರ್ಕ ಮಾಡುತ್ತಾರೆ. ಈ ಇಬ್ಬರು ಸಫ್ಘಾನ್ ಮನೆಯಲ್ಲಿ ಎರಡು ದಿನಗಳ ಕಾಲ ವಾಸವಿದ್ದು, ಮೇ 1ರಂದು ಸುಹಾಸ್ ಚಲನವಲನ ಗಮನಿಸಿ ಕೊಲೆ ಮಾಡಿದ್ದಾರೆ ಎಂದು ಅನುಪಮ್ ಅಗರ್ವಾಲ್ ತಿಳಿಸಿದರು.
ವೈರಲ್ ಆದ ವಿಡಿಯೋದಲ್ಲಿ ಬುರ್ಖಾದಾರಿ ಮಹಿಳೆಯೊಬ್ಬರು ಕೊಲೆ ಆರೋಪಿಗಳ ಜೊತೆ ಮಾತನಾಡುವ ಬಗ್ಗೆ ಕೇಳಿದ ಪ್ರಶ್ನೆಗೆ "ಮಹಿಳೆ ನಿಯಾಜ್ ಸಂಬಂದಿಯಾಗಿದ್ದು, ಅವರನ್ನು ಮುಂದಿನ ದಿನದಲ್ಲಿ ತನಿಖೆ ಮಾಡಲಾಗುವುದು ಎಂದು ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.