ಮಂಗಳೂರು : ಕೇಂದ್ರ ಸರಕಾರದ ಬೆಲೆ ಏರಿಕೆ ವಿರುದ್ಧ ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಕಟ್ಟಿಗೆ, ಖಾಲಿ ಗ್ಯಾಸ್ ಸಿಲಿಂಡರ್ ಜತೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು. ನಗರದ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ನಡೆದ ಮೆರವಣಿಗೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಭಿತ್ತಿ ಪತ್ರ ಪ್ರದರ್ಶಿಸುತ್ತಾ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿ, ಮಿನಿ ವಿಧಾನ ಸೌಧದ ಎದುರು ನಡೆದ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕೇಂದ್ರದಲ್ಲಿ ಕಳೆದ 11 ವರ್ಷಗಳಿಂದ ಎನ್‌ಡಿಎ ಸರಕಾರವಿದೆ. ಅದಕ್ಕೆ ಹಿಂದಿದ್ದ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರಲ್‌ಗೆ 141 ಡಾಲರ್ ಇದ್ದ ಸಂದರ್ಭದಲ್ಲಿಯೂ ಪೆಟ್ರೋಲ್ ಬೆಲೆ 60 ರೂ. ನಲ್ಲಿ ಸಿಗುತ್ತಿತ್ತು. ಗ್ಯಾಸ್ ದರ 490 ರೂ. ಗಳಾಗಿತ್ತು. ಆದರೆ ಇದೀಗ ಕಚ್ಚಾತೈಲ ಬೆಲೆ 64 ಡಾಲರ್ ಗೆ ಇಳಿಕೆಯಾಗಿದ್ದರೂ ಪೆಟ್ರೋಲ್ ಬೆಲೆ, ಡೀಸೆಲ್ ಹಲ ಇಳಿಕೆಯಾಗಿಲ್ಲ. ಬದಲಾಗಿ ಈಗಾಗಲೇ ಹಲವು ಬಾರಿ ಏರಿಕೆ ಮಾಡಿರುವ ಕೇಂದ್ರ ಸರ್ಕಾರ ಗ್ಯಾಸ್ ಬೆಲೆಯನ್ನೂ ಇತ್ತೀಚೆಗೆ 50 ರೂ. ಗಳಿಗೆ ಏರಿಕೆ ಮಾಡಿದೆ. ಕರ್ನಾಟಕ ಸರಕಾರ 2 ರೂ. ದರ ಹೆಚ್ಚಿಸಿದರೆ ಜನಾಕ್ರೋಶ ವ್ಯಕ್ತಪಡಿಸುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಮಾಡುವ ಸಂದರ್ಭದಲ್ಲೇ ಕೇಂದ್ರ ಸರಕಾರ ಗ್ಯಾಸ್ ಬೆಲೆ ಏರಿಕೆ ಮಾಡಿ ಬಿಜೆಪಿಯವರಿಗೆ ಕಪಾಳಮೋಕ್ಷ ಮಾಡಿದೆ. ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬರುವ ಸಂದರ್ಭ ರೂಪಾಯಿ ಮೌಲ್ಯ ಒಂದು ರೂಪಾಯಿಗೆ ಒಂದು ಡಾಲರ್ ಮಾಡುವುದಾಗಿ ಹೇಳಿದ್ದರು. ಆದರೆ ಜಾಗತಿತ ಮಟ್ಟದಲ್ಲಿ ರೂಪಾಯಿಗೆ ಬೆಲೆಯೇ ಇಲ್ಲದಂತೆ ಆಗುತ್ತಿದೆ. ಬಿಜೆಪಿ ಆಡಳಿತದಲ್ಲಿ ಮೋದಿ, ಅಮಿತ್‌ಶಾ, ಅಂಬಾನಿ ಮತ್ತು ಅದಾನಿಗೆ ಮಾತ್ರವೇ ಅಚ್ಚೇ ದಿನ್ ಬಂದಿರುವುದು ಎಂದು ಅವರು ದೂರಿದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ನಮ್ಮ ದೇಶದ ಬಹುದೊಡ್ಡ ಸಮಸ್ಯೆ ಎಂದರೆ ನಿರುದ್ಯೋಗ ಮತ್ತು ಬೆಲೆ ಏರಿಕೆ. ಸಜೀವ ಸರಕಾರ ಈ ಬಗ್ಗೆ ಗಂಭೀರವಾಗಿ ಪ್ರಯತ್ನಿಸಬೇಕಿತ್ತು. ಆದರೆ ಪ್ರಧಾನಿ ಮೋದಿಯವರಿಗೆ ಹಿಂದೆ ಯುಪಿಎ ಸರಕಾರದ ವಿರುದ್ಧ ಮಾಡಿದ್ದ ಭಾಷಣದ ಮಾತುಗಳನ್ನು ಈಗ ನೆನಪಿಸಬೇಕಿದೆ. ರಾಜ್ಯ ಸರಕಾರದ ವಿರುದ್ಧ ಬಿಜೆಪಿಯ ಜನಾಕ್ರೋಶದ ವೇಳೆ ಅಧ್ಯಕ್ಷ ವಿಜಯೇಂದ್ರ ಅವರಿಗೆ ಸ್ವಂತ ಬುದ್ದಿ ಇದ್ದ ಹಾಗಿಲ್ಲ. ಅಂತರರಾಷ್ಟ್ರೀಯವಾಗಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ ಏರಿಕೆಯಾಗಿದೆ ಎನುತ್ತಾರೆ. ಕಾಂಗ್ರೆಸ್ ಜಮೀನುದಾರರು, ಬಂಡವಾಳ ಶಾಹಿಗಳಿಗೆ ತೊಂದರೆ ನೀಡಿದೆಯೇ ಹೊರತು ಯಾವತ್ತೂ ಬಡ ಜನರಿಗೆ ಅನ್ಯಾಯ ಮಾಡಿಲ್ಲ ಎಂದರು.
ಭಯೋತ್ಪಾದನೆಯನ್ನು ನಿಗ್ರಹಿಸುವುದಾಗಿ ಹೇಳಿದವರು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ಘಟನೆಯನ್ನೂ ರಾಜಕಾರಣಕ್ಕೆ ಬಳಸುತ್ತಾರೆ. ಬಿಹಾರದ ಚುನಾವಣಾ ಪ್ರಚಾರದಲ್ಲಿ ದ್ವೇಷದ ಭಾಷಣ ಮಾಡುತ್ತಾರೆ. ಪ್ರಧಾನಿ ಮೋದಿಯವರು ಹಿಂದೆ ಯುಪಿಎ ಸರಕಾರಕ್ಕೆ ಭಯೋತ್ಪಾದನೆ ವಿರುದ್ಧ ಕೇಳಿದ್ದ ಮಾತುಗಳನ್ನು ನೆನಪಿಸಬೇಕಿದೆ. ಅಂದು ಇಂಟೆಲಿಜೆನ್ಸಿ, ಬಿಎಸ್‌ಎಫ್, ಮಿಲಿಟರಿ, ಗೃಹ ಇಲಾಖೆ ಯಾರ ಕೈಯ್ಯಲ್ಲಿ ಇರುವುದು ಎಂದು ಕೇಳಿರುವ ಮೋದಿ ಸಾಹೇಬರೇ ಇಂದು, ಅವೆಲ್ಲವೂ ಯಾರ ಕೈಯ್ಯಲಿಲ್ಲವೇ ಎಂದು ಹೇಳಿ ಎಂದು ರಮಾನಾಥ ರೈ ಪ್ರಶ್ನಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಮಾತನಾಡಿ, ಸತ್ಯವನ್ನು ಸುಳ್ಳಾಗಿಸುವ, ಸುಳ್ಳನ್ನು ಸತ್ಯವಾಗಿಸುವ ಪ್ರಚಾರ ಕಾರ್ಯ ವೇಗವಾಗಿ ನಡೆಯುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 2014ರ ಹಿಂದೆ ಕಚ್ಚಾತೈಲ ಬ್ಯಾರಲ್‌ಗೆ 141 ಡಾಲರ್ ಇದ್ದ ಸಮಯದಲ್ಲಿ 60 ರೂ. ಗೆ ಪೆಟ್ರೋಲ್ ಸಿಗುತ್ತಿತ್ತು. ಆದರೆ ಇದೀಗ ಕಚ್ಚಾತೈಲ ಬೆಲೆ 64 ಡಾಲರ್‌ಗೆ ಇಳಿದಿದ್ದರೂ ಗೆ ಅನಿಲ ದರವನ್ನು 50 ರೂ. ಗಳಿಗೆ ಏರಿಕೆ ಮಾಡಿರುವುದು ಕೇಂದ್ರದ ಸಾಧನೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ದಿನನಿತ್ಯ ಉಪಯೋಗಿಸುವ ಆಹಾರ ಸಾಮಗ್ರಿಗಳ ಬೇ ಏರಿಕೆಯಾಗಿದೆ. ಆದರೆ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವ ಬಿಜೆಪಿಯವರಿಗೆ ನಾಚಿಯಾಗಿಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಹಲ್ಲಾಮ್‌ನಲ್ಲಿ ಭಾರತೀಯರು ಭಯೋತ್ಪಾದಕರಿಂದ ಕೊಲ್ಲಲ್ಪಟ್ಟಾಗ ಸರ್ವ ಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ಕೂಡಾ ಸಂಪೂರ್ಣ ಬೆಂಬಲವನ್ನು ಕೇಂದ್ರ ಸರಕಾರಕ್ಕೆ ನೀಡಿದೆ. ಆದರೆ ಇಂತಹ ಅಪಾಯಕಾರಿ ಘಟನೆಯ ವೇಳೆ ಸೌದಿ ಅರೇಬಿಯಾದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿಂದ ಬಂದು ನೊಂದವರಿಗೆ ಸಾಂತ್ವಾನ ನೀಡುವುದು ಬಿಟ್ಟು ಬಿಹಾರದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಜನರಿಗೆ ಅರಿವು ಮೂಡಿದೆ. ಜನಸಾಮಾನ್ಯರನ್ನು ಬೆಲೆ ಏರಿಕೆ ಮೂಲಕ ಕಂಗೆಡಿಸುತ್ತಿರುವ ಕೇಂದ್ರ ಸರಕಾರದ ನೀತಿಗಳ ವಿರುದ್ಧ ಮುಂದೆ ಇನ್ನಷ್ಟು ತೀವ್ರತೆರನಾದ ಪ್ರತಿಭಟನೆ ನಡೆಯಲಿದೆ ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಜೆ ಆರ್ ಲೋಬೊ, ಇನಾಯತ್ ಅಲಿ, ಎಂ ಎಸ್ ಮುಹಮ್ಮದ್, ರಕ್ಷಿತ್ ಶಿವರಾಮ್, ಭರತ್ ಮುಂಡೋಡಿ, ಶಾಲೆಟ್ ಪಿಂಟೋ, ಇಬ್ರಾಹಿಂ ನವಾಜ್, ವಿಶ್ವಾಸ್ ದಾಸ್, ಸುಹಾನ್ ಆಳ್ವಾ, ಬಿ ಎಂ ಅಬ್ಬಾಸ್ ಅಲಿ, ಸದಾಶಿವ ಉಳ್ಳಾಲ್, ದಿನೇಶ್ ಮುಳೂರು, ಸುದರ್ಶನ್ ಜೈನ್, ಜೋಕಿಮ್ ಡಿ ಸೌಝ, ನಾರಾಯಣ ನಾಯಕ್, ಸಾಹುಲ್ ಹಮೀದ್, ಭಾಸ್ಕರ್ ಕೆ, ವೆಂಕಪ್ಪ ಗೌಡ, ಸುದೀರ್ ಶೆಟ್ಟಿ ಕಡಬ, ಸುರೇಂದ್ರ ಕಾಂಬ್ಳಿ, ಅಬ್ದುಲ್ ರವೂಫ್, ಪಿ ಸಿ ಜಯರಾಮ್ ಸುಳ್ಯ, ಕೃಷ್ಣ ಪ್ರಸಾದ್ ಆಳ್ವಾ ಪುತ್ತೂರು, ಮೋಹನ್ ಕೋಟಿಯನ್ ಮೂಲ್ಕಿ, ಪ್ರಕಾಶ್ ಸಾಲಿಯಾನ್ ಪುರೊಷೋತ್ತಮ ಚಿತ್ರಪುರ, ರಮೇಶ್ ಶೆಟ್ಟಿ ಬೋಳಿಯಾರ್, ನಾಗೇಶ್ ಗೌಡ ಬೆಳ್ತಂಗಡಿ, ಪ್ರಶಾಂತ್ ಕಾಜವ ಮುಡಿಪು, ಪದ್ಮನಾಭ ಪೂಜಾರಿ ವಿಟ್ಲ, ಜೆ. ಅಬ್ದುಲ್ ಸಲೀಂ, ಬೇಬಿ ಕುಂದರ್, ಬಾಲಕೃಷ್ಣ ಅಂಚನ್, ಚಂದ್ರಶೇಖರ ಬಂಡಾರಿ, ಅಭಿಲಾಶ್ ಕಡಬ, ಅಶ್ರಫ್ ಕೆ, ನಿರಾಜ್ ಚಂದ್ರ ಪಾಲ್, ವಿಕಾಸ್ ಶೆಟ್ಟಿ, ಮ ನ ಪಾ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಹಾಗೂ ನಾಯಕರು, ಕೆಪಿಸಿಸಿ ಸದಸ್ಯರು ವಿವಿಧ ಘಟಕದ ಬ್ಲಾಕ್ ಅಧ್ಯಕ್ಷರು ಉಪಸ್ಥಿತರಿದ್ದರು.