ರಾಯ್ಪುರ: ಛತ್ತೀಸ್ಗಢ-ತೆಲಂಗಾಣ ಗಡಿಯಲ್ಲಿ 1,000 ನಕ್ಸಲರನ್ನು 20,000ಕ್ಕೂ ಭದ್ರತಾ ಸಿಬ್ಬಂದಿ ಸುತ್ತುವರೆದಿದ್ದಾರೆ ಎಂಬ ವರದಿ ಇದೆ. ಬಿಜಾಪುರದ ದಟ್ಟಾರಣ್ಯದಲ್ಲಿ ಈ ಪ್ರಮಾಣದ ನಕ್ಸಲರು ಅಲ್ಲಲ್ಲಿ ಅಡಗುತಾಣಗಳಲ್ಲಿ ಅಡಗಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು, ಇದೀಗ ಕೂಂಬಿಂಗ್ ಕಾರ್ಯಾಚರಣೆ ಪ್ರಾರಂಭಿಸಿವೆ. ಈ ಕಾರ್ಯಾಚರಣೆ ಸುಮಾರು ನಾಲ್ಕು ದಿನಗಳವರೆಗೆ ನಡೆಯಬಹುದು. ಇಂದು ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಮೂವರು ನಕ್ಸಲರು ಹತರಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಜಾಪುರ ಜಿಲ್ಲೆಯ ರಾಜ್ಯ ಗಡಿ ಪ್ರದೇಶದಲ್ಲಿರುವ ಕರೇಗುಟ್ಟ ಬೆಟ್ಟಗಳ ಕಾಡಿನಲ್ಲಿ ಬೆಳಿಗ್ಗೆ ಭದ್ರತಾ ಪಡೆಗಳ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಈ ಎನ್ಕೌಂಟರ್ ನಡೆದಿದೆ. ದೊಡ್ಡ ಪ್ರಮಾಣದಲ್ಲಿ ನಕ್ಸಲರು ಅಡಗಿಕೊಂಡಿರುವ ಮಾಹಿತಿ ಇದೆ. ಹಾಗಾಗಿ ನಕ್ಸಲ್ ಕಾರ್ಯಾಚರಣೆ ಮೂರ್ನಾಲ್ಕು ದಿನಗಳವರೆಗೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದೊಂದು ದೊಡ್ಡ ನಕ್ಸಲ್ ಕಾರ್ಯಾಚರಣೆ. ಸೈನಿಕರ ತಂಡವೊಂದು ಗುಡ್ಡಗಾಡು ಪ್ರದೇಶಗಳಲ್ಲಿ ನೆಲಬಾಂಬ್ ತೆಗೆಯುವ ಕಾರ್ಯದಲ್ಲಿ ನಿರತವಾಗಿದೆ. ಸೈನಿಕರನ್ನು ಗುರಿಯಾಗಿಸಿಕೊಂಡು ನಕ್ಸಲರು 100ಕ್ಕೂ ಹೆಚ್ಚು ಸುಧಾರಿತ ಸ್ಫೋಟಕ ಸಾಧನ (ಐಇಡಿ)ಗಳನ್ನು ಇಟ್ಟಿದ್ದು, ಅವುಗಳ ಶೋಧನೆ ನಡೆದಿದೆ. ಭದ್ರತಾ ಪಡೆಗಳು ಡ್ರೋನ್ ಹಾಗೂ ಉಪಗ್ರಹಗಳ ಸಹಾಯದಿಂದ ಕರೇಗುಟ್ಟ ಪರ್ವತದ ಮೇಲೆ ಈಗಾಗಲೇ ಕಣ್ಣಿಟ್ಟಿವೆ. ಹೆಚ್ಚಿನ ಸಂಖ್ಯೆಯ ಮಾವೋವಾದಿಗಳು ಇರುವ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ದೊರೆತ ನಂತರ ಈ ಬೃಹತ್ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಈಗಾಗಲೇ ಈ ಪೈಕಿ ಮೂವರು ನಕ್ಸಲರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಜಾಪುರ ಜಿಲ್ಲೆಯ ಉಸುರು ಪೊಲೀಸ್ ಠಾಣೆ ವ್ಯಾಪ್ತಿಯ ಕರೇಗುಟ್ಟವೊಂದರಲ್ಲೇ 1,000 ಸಂಖ್ಯೆಯ ಮಾವೋವಾದಿಗಳು ಅಡಗಿಕೊಂಡಿರುವ ಮಾಹಿತಿಯ ಮೇರೆಗೆ ಕೇಂದ್ರ ಅರೆಸೈನಿಕ ಪಡೆಗಳು ಈ ಕಾರ್ಯಾಚರಣೆಯನ್ನು ನಡೆಸಿವೆ. ಅವರೆಲ್ಲರೂ ಮಾವೋವಾದಿ ಕಮಾಂಡರ್ ಹಿಡ್ಮಾ ನೇತೃತ್ವದಲ್ಲಿ ಅಲ್ಲಿಗೆ ಸೇರಿರುವ ಮಾಹಿತಿ ಇದೆ. ಈಗಾಗಲೇ ಆ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆದಿದೆ. ಭೀಮವರಂಪಾಡು, ಪೂಜಾರಿ ಕಂಕೇರ್, ಪಾಮೇಡು ಅರಣ್ಯ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿ ಬರುತ್ತಿದೆ. ಕೂಂಬಿಂಗ್ ಹಿನ್ನೆಲೆಯಲ್ಲಿ, ಕರೇಗುಟ್ಟ ದಂಡಕಾರಣ್ಯಂ ಅರಣ್ಯದ ಹಲವಾರು ಗ್ರಾಮಗಳಿಗೆ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಹಾಕಾರ್ಯಾಚರಣೆಯಲ್ಲಿ ಡಿಆರ್ಜಿ ಬಸ್ತಾರ್ ಫೈಟರ್ ಕೋಬ್ರಾ, ಸಿಆರ್ಪಿಎಫ್, ಎಸ್ಟಿಎಫ್ ಸೈನಿಕರು ಸೇರಿದಂತೆ ತೆಲಂಗಾಣ, ಛತ್ತೀಸ್ಗಢ ಮತ್ತು ಮಹಾರಾಷ್ಟ್ರ ಪೊಲೀಸರು ಸಹ ಭಾಗವಹಿಸಿದ್ದಾರೆ. ನೆಲಬಾಂಬ್ಗಳನ್ನು ಇರಿಸಲಾಗಿದ್ದು, ಅರಣ್ಯ ಪ್ರದೇಶಕ್ಕೆ ಯಾರೂ ಪ್ರವೇಶಿಸಬಾರದು ಎಂದು ಮಾವೋವಾದಿಗಳು ಈಗಾಗಲೇ ಪತ್ರಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಭದ್ರತಾ ಪಡೆಗಳು ಅತ್ಯಂತ ಜಾಗರೂಕತೆಯಿಂದ ಶೋಧ ನಡೆಸುತ್ತಿದೆ. ಬುಧವಾರ 3,000 ಭದ್ರತಾ ಸಿಬ್ಬಂದಿಯೊಂದಿಗೆ ಕೂಂಬಿಂಗ್ ಕಾರ್ಯಾಚರಣೆ ನಡೆದಿದ್ದು, ಗುರುವಾರ ಬೆಳಿಗ್ಗೆ ಹೆಚ್ಚುವರಿಯಾಗಿ 2,000 ಸಿಬ್ಬಂದಿಯನ್ನು ಕರೆತರಲಾಗಿದೆ. ಸುಮಾರು 5,000ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಕರೇಗುಟ್ಟಲ ಅರಣ್ಯ ಪ್ರದೇಶವನ್ನು ಸುತ್ತುವರೆದಿದ್ದಾರೆ. ಹಿಡ್ಮಾ ಜೊತೆಗೆ ಮಾವೋವಾದಿ ಬೆಟಾಲಿಯನ್ ಮುಖ್ಯಸ್ಥ ದೇವಾ ಅವರನ್ನು ಗುರಿಯಾಗಿಸಿಕೊಂಡು ಈ ಮಹಾಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.