ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ನ ಆಡಳಿತ, ಪ್ರತಿನಿತ್ಯದ ಕಾರ್ಯಚಟುವಟಿಕೆ, ಸಾಹಿತ್ಯ ಸಮ್ಮೇಳನ ಪರಿಣಾಮಕಾರಿಯಾಗಿ ನಡೆಯುವ ಉದ್ದೇಶದಿಂದ ಬೈಲಾದಲ್ಲಿ ತಿದ್ದುಪಡಿ ತರಲು ಪರಿಷತ್ತು ಉದ್ದೇಶಿಸಿದೆ.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಸ್. ಪಾಚ್ಚಾಪುರೆ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯ ಶಿಫಾರಸ್ಸಿನ ಅನುಸಾರ ಈಗ ಬೈಲಾ ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದೆ.
ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಮಂಡನೆ: ಕನ್ನಡ ಸಾಹಿತ್ಯ ಪರಿಷತ್ತು ಏಪ್ರಿಲ್ 27ರಂದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸರ್ವಸದಸ್ಯರ ವಿಶೇಷ ಸಭೆ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಉದ್ದೇಶಿತ ತಿದ್ದುಪಡಿಯನ್ನು ಮಂಡಿಸಲಾಗುತ್ತದೆ.
ಮೂರನೇ ಬಾರಿಗೆ ಬೈಲಾ ತಿದ್ದುಪಡಿ ತರುತ್ತಿದ್ದು, 'ಸಾಹಿತ್ಯ ಸಮ್ಮೇಳನ ಸುಸೂತ್ರವಾಗಿ ನಡೆಯಲು ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರು ತಾವೇ ನೇರವಾಗಿ ಅಥವಾ ಮಾರ್ಗಸೂಚಿ ಉಪಸಮಿತಿಯನ್ನು ರಚಿಸಿ, ಮಾರ್ಗಸೂಚಿಗಳನ್ನು ಹೊರಡಿಸಬಹುದಾಗಿದೆ. ಹೀಗೆ ರಚಿಸಿದ ಮಾರ್ಗಸೂಚಿಗಳನ್ನು ಸಮ್ಮೇಳನ ನಡೆಯುವ ಜಿಲ್ಲೆಯ ಜಿಲ್ಲಾಡಳಿತ ಮತ್ತು ಸರ್ಕಾರದ ವಿವಿಧ ಇಲಾಖೆಗಳು ಕಡ್ಡಾಯವಾಗಿ ಪಾಲಿಸತಕ್ಕದ್ದು' ಎಂದು ತಿದ್ದುಪಡಿಯಲ್ಲಿ ಪ್ರಸ್ತಾಪಿಸಲಾಗಿದೆ.
ಈ ಹಿಂದೆ 2022ರಲ್ಲಿ ಪರಿಷತ್ತಿನ ಬೈಲಾದಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿತ್ತು. 2023ರಲ್ಲಿ ಎರಡನೇ ಬಾರಿ ತಿದ್ದುಪಡಿ ಮಾಡಲಾಗಿತ್ತು.
ಪ್ರಸ್ತುತ ಪ್ರಸ್ತಾಪಿತ ತಿದ್ದುಪಡಿಯು 20 ನಿಯಮಗಳನ್ನು ಒಳಗೊಂಡಿದೆ. ಒಂದು ವೇಳೆ ಇದು ಅಂಗೀಕಾರವಾದರೆ, ಜಿಲ್ಲಾ ಘಟಕವೂ ಸೇರಿದಂತೆ ತೆರವಾದ ವಿವಿಧ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ, ನಾಮನಿರ್ದೇಶನಗೊಂಡ ಸದಸ್ಯರನ್ನು ಕಾರಣ ನೀಡದೇ ಬದಲಾಯಿಸುವಂತಹ ಅಧಿಕಾರ ರಾಜ್ಯ ಘಟಕದ ಅಧ್ಯಕ್ಷರಿಗೆ ಪ್ರದತ್ತವಾಗಲಿದೆ.
ಜಿಲ್ಲೆ, ಗಡಿನಾಡು, ಗಡಿರಾಜ್ಯ ಘಟಕದ ಅಧ್ಯಕ್ಷರು, ನಾಮನಿರ್ದೇಶನಗೊಂಡ ಸದಸ್ಯರು ಕೇಂದ್ರ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಗಳಿಗೆ ರಾಜ್ಯ ಘಟಕದ ಅಧ್ಯಕ್ಷರ ಅನುಮತಿ ಪಡೆಯದೆ ಸತತ ಮೂರು ಬಾರಿ ಗೈರಾಗುವಂತಿಲ್ಲ. ಒಂದು ವೇಳೆ ಗೈರಾದಲ್ಲಿ ಅವರ ಸದಸ್ಯತ್ವವು ಸ್ವಯಂಚಾಲಿತವಾಗಿ ರದ್ದಾಗಲಿದೆ. ಹೀಗೆ ತೆರವಾದ ಸ್ಥಾನಕ್ಕೆ ನಾಮನಿರ್ದೇಶನ ಮಾಡುವ ಅಧಿಕಾರವನ್ನು ಪ್ರಸ್ತಾಪಿತ ತಿದ್ದುಪಡಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷರಿಗೆ ನೀಡಲಾಗಿದೆ.
ನಿಧನ, ರಾಜೀನಾಮೆ ಹಾಗೂ ಅನರ್ಹತೆ ಸೇರಿ ವಿವಿಧ ಕಾರಣದಿಂದ ಜಿಲ್ಲಾ ಘಟಕದ ಚುನಾಯಿತ ಅಧ್ಯಕ್ಷರ ಸ್ಥಾನ ತೆರವಾದರೆ, ಆ ಸ್ಥಾನಕ್ಕೆ ಮುಂದಿನ ಆದೇಶ ಅಥವಾ ಚುನಾವಣೆವರೆಗೆ ನಾಮನಿರ್ದೇಶನ ಮಾಡುವ ಅಧಿಕಾರವೂ ಅಧ್ಯಕ್ಷರಿಗೆ ಇರಲಿದೆ. ತಾಲೂಕು ಮತ್ತು ಹೋಬಳಿ ಘಟಕದಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸಿದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರು ರಾಜ್ಯ ಘಟಕದ ಅಧ್ಯಕ್ಷರೊಂದಿಗೆ ಚರ್ಚಿಸಿ, ಅನುಮತಿ ಪಡೆದ ನಂತರವೇ ನಿಗದಿತ ಸ್ಥಾನಕ್ಕೆ ಹೆಸರನ್ನು ಘೋಷಿಸಬೇಕೆಂದು ತಿಳಿಸಲಾಗಿದೆ.
ನಾಮನಿರ್ದೇಶಿತ ಸದಸ್ಯರನ್ನು ಯಾವುದೇ ಕಾರಣ ನೀಡದೆ ಬದಲಾವಣೆ ಮಾಡುವ ಅಧಿಕಾರವನ್ನೂ ತಿದ್ದುಪಡಿಯಲ್ಲಿ ಸೇರ್ಪಡೆ ಮಾಡಲಾಗಿದೆ. ನಾಮನಿರ್ದೇಶಿತ ಸದಸ್ಯರು ಗುರುತರ ಆರೋಪದಡಿ ರಾಜೀನಾಮೆ ನೀಡಿದಲ್ಲಿ, ಅವರ ರಾಜೀನಾಮೆಯನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಕಸಾಪ ರಾಜ್ಯ ಘಟಕದ ಅಧ್ಯಕ್ಷರು ಹೊಂದಿರುತ್ತಾರೆಂದು ತಿದ್ದುಪಡಿಯ ಬೈಲಾದಲ್ಲಿ ಉಲ್ಲೇಖಿಸಲಾಗಿದೆ.