ಶ್ರೀನಗರ: ಕಾಶ್ಮೀರವು ಅಪರೂಪದ ಸಿನಿಮಾ ಸಮಾರಂಭಕ್ಕೆ ಸಾಕ್ಷಿಯಾಯಿತು. ಸುಮಾರು 4 ದಶಕಗಳಲ್ಲಿ ಮೊದಲ ಬಾರಿ ಎನ್ನುವಂತೆ ಗ್ರೌಂಡ್ ಝೀರೋ ಚಿತ್ರದ ರೆಡ್ ಕಾರ್ಪೆಟ್ ಪ್ರಥಮ ಪ್ರದರ್ಶನವನ್ನು ಶುಕ್ರವಾರ ಆಯೋಜಿಸಲಾಗಿತ್ತು.
ಬಾಲಿವುಡ್ ಇಮ್ರಾನ್ ಹಶ್ಮಿ ನಟನೆಯ ಈ ಆಕ್ಷನ್-ಥ್ರಿಲ್ಲರ್ ಚಿತ್ರವನ್ನು ಕಣಿವೆ ಪ್ರದೇಶ, ಅದರಲ್ಲೂ ಉತ್ತರ ಕಾಶ್ಮೀರದಲ್ಲಿ ವ್ಯಾಪಕವಾಗಿ ಚಿತ್ರೀಕರಿಸಲಾಗಿದೆ. ಶ್ರೀನಗರದ ಐನಾಕ್ಸ್ನಲ್ಲಿ ನಡೆದ ಪ್ರದರ್ಶನದಲ್ಲಿ ಗಡಿ ಭದ್ರತಾ ಪಡೆಗಳ ಅಧಿಕಾರಿಗಳು, ಜಮ್ಮು ಕಾಶ್ಮೀರ ಪೊಲೀಸ್ ಅಧಿಕಾರಿಗಳು ಮತ್ತು ಕಣಿವೆ ಪ್ರದೇಶದ ಪ್ರಮುಖ ವ್ಯಕ್ತಿಗಳು ಚಿತ್ರದ ಪಾತ್ರವರ್ಗ ಮತ್ತು ತಂಡದೊಂದಿಗೆ ಭಾಗವಹಿಸಿದ್ದರು. ಬಹುನಿರೀಕ್ಷಿತ ಚಿತ್ರ ಏಪ್ರಿಲ್ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಶುಕ್ರವಾರ ಬೆಳಗ್ಗೆ ತಮ್ಮ ತಂಡದೊಂದಿಗೆ ಶ್ರೀನಗರಕ್ಕೆ ಆಗಮಿಸಿದ ನಟ ಇಮ್ರಾನ್ ಹಶ್ಮಿ, ಹೈ ಪ್ರೊಫೈಲ್ ಪ್ರೀಮಿಯರ್ನ ಸಾರಥ್ಯ ವಹಿಸಿದ್ದರು. ಈವೆಂಟ್ ಅನ್ನು 'ಭಾವನಾತ್ಮಕ' ಮತ್ತು 'ಸಾಂಕೇತಿಕ' ಕ್ಷಣ ಎಂದು ಬಣ್ಣಿಸಿದರು. ಬಾಲಿವುಡ್ ನಟ ಈ ಚಿತ್ರದಲ್ಲಿ ಮಿಲಿಟರಿ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸಿನಿಮಾ ನೈಜ ಘಟನೆಗಳಿಂದ ಪ್ರೇರಿತವಾಗಿದೆ ಮತ್ತು 2001ರಲ್ಲಿ ಕಣಿವೆಯಿಂದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಅನ್ನು ನಿರ್ಮೂಲನೆ ಮಾಡಲು ಗಡಿ ಭದ್ರತಾ ಪಡೆಗಳು ಕೈಗೊಂಡ ರಹಸ್ಯ ಕಾರ್ಯಾಚರಣೆಯನ್ನು ಆಧರಿಸಿದೆ ಎಂದು ನಟ ಹಂಚಿಕೊಂಡರು.
ಈ ಚಿತ್ರದಲ್ಲಿ ನಟ ಇಮ್ರಾನ್ ಹಶ್ಮಿ ಅವರ ಪಾತ್ರವು ಅವರ ಹಿಂದಿನ ರೊಮ್ಯಾಂಟಿಕ್ ಪಾತ್ರಗಳಿಗಿಂತ ಭಿನ್ನವಾಗಿರಲಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು 'ಅಸಾಧಾರಣ' ಎಂದು ಬಣ್ಣಿಸಿದ್ದಾರೆ. ಅನೇಕ ದಾಳಿಗಳಿಗೆ ಕಾರಣನಾದ ಮಾಸ್ಟರ್ ಮೈಂಡ್‌ನನ್ನು ಪತ್ತೆಹಚ್ಚುವ ದೊಡ್ಡ ಕಾರ್ಯಾಚರಣೆಯನ್ನು ಈ ಚಿತ್ರ ಚಿತ್ರಿಸಲಿದೆ. ಹಶ್ಮಿ ಆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆಂದು ಹೇಳಿದರು.
ಗ್ರೌಂಡ್ ಝೀರೋ ಚಿತ್ರದಲ್ಲಿ, ಬಿಎಸ್‌ಎಫ್ ಡೆಪ್ಯೂಟಿ ಕಮಾಂಡೆಂಟ್ ನರೇಂದ್ರ ನಾಥ್ ದುಬೆ ಪಾತ್ರವನ್ನು ನಿರ್ವಹಿಸಿದ್ದಾರೆ. ದುಬೆ ಅವರು 2001ರಲ್ಲಿ ಭಾರತೀಯ ಸಂಸತ್ತಿನ ಮೇಲೆ ದಾಳಿಯ ಮಾಸ್ಟರ್ ಮೈಂಡ್ ಮತ್ತು 2002 ಸೆಪ್ಟೆಂಬರ್‌ನಲ್ಲಿ ಗುಜರಾತ್‌ನ ಅಕ್ಷರಧಾಮ ದೇವಾಲಯದ ಮೇಲಿನ ದಾಳಿಯ ಮಾಸ್ಟರ್ ಮೈಂಡ್‌ನನ್ನು ಬಂಧಿಸುವ ಕಾರ್ಯಾಚರಣೆಯನ್ನು ಮುನ್ನಡೆಸಿದ್ದರು. ಜೈಶ್ ಮುಖ್ಯಸ್ಥನನ್ನು 2003ರಲ್ಲಿ ಜನದಟ್ಟಣೆಯ ಶ್ರೀನಗರದಲ್ಲಿ ಬಿಎಸ್‌ಎಫ್ ಸೆರೆ ಹಿಡಿದಿತ್ತು. 2005ರಲ್ಲಿ ಆಗಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಂದ ದುಬೆ ಅವರು ಕೀರ್ತಿ ಚಕ್ರವನ್ನು ಪಡೆದುಕೊಂಡಿದ್ದರು.
''38 ವರ್ಷಗಳ ನಂತರ ಶ್ರೀನಗರದಲ್ಲಿ ರೆಡ್ ಕಾರ್ಪೆಟ್ ಪ್ರೀಮಿಯರ್ ನಡೆಯುತ್ತಿದ್ದು, ಬಹಳ ದೊಡ್ಡ ದಿನ'' ಎಂದು ನಾಯಕ ನಟ ಇಮ್ರಾನ್ ಹಶ್ಮಿ ತಿಳಿಸಿದರು.