ನವದೆಹಲಿ: "ದೆಹಲಿ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ಹಣದ ಕಂತೆಗಳು ಸುಟ್ಟು ಹೋದ ಪ್ರಕರಣದಲ್ಲಿ ಪೊಲೀಸರು ಎಫ್ಐಆರ್ ಏಕೆ ದಾಖಲಿಸಿಲ್ಲ" ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಪ್ರಶ್ನಿಸಿದ್ದಾರೆ.
"ಆರೋಪಗಳು ಬಂದಾಗ ನ್ಯಾಯಾಂಗವೂ ಸೇರಿದಂತೆ ಯಾವುದೇ ಸಂಸ್ಥೆಗಳು ಸಂವಿಧಾನ ಮತ್ತು ದೇಶದ ಕಾನೂನುಗಳಿಗಿಂತ ಮಿಗಿಲಲ್ಲ. ಹೀಗಿದ್ದಾಗ, ಪೊಲೀಸ್ ತನಿಖೆ ನಡೆಯದೇ ಇರುವುದು ದೇಶದ ಜನರಿಗೆ ಅಚ್ಚರಿ ಮೂಡಿಸಿದೆ" ಎಂದು ಅವರು ಹೇಳಿದ್ದಾರೆ.
"ಇಂಥದ್ದೇ ಘಟನೆ ಸಾಮಾನ್ಯ ವ್ಯಕ್ತಿಯ ಮನೆಯಲ್ಲಿ ನಡೆದಿದ್ದರೆ, ತನಿಖೆಯು ರಾಕೆಟ್ ವೇಗ ಪಡೆಯುತ್ತಿತ್ತು. ಈಗ ಎತ್ತಿನಬಂಡಿಯಂತೆಯೂ ನಡೆಯುತ್ತಿಲ್ಲ. ನ್ಯಾಯಾಂಗಕ್ಕಿರುವ ಸ್ವಾತಂತ್ರ್ಯವು ತನ್ನ ವಿರುದ್ಧದ ಆರೋಪಗಳನ್ನು ತಡೆಯುವ 'ರಕ್ಷಣಾ ಕವಚ'ವಲ್ಲ" ಎಂದು ಹೇಳುವ ಮೂಲಕ ನ್ಯಾಯಾಂಗದ ಅಪರಿಮಿತಿ ಅಧಿಕಾರದ ಮೇಲೆ ಪ್ರಶ್ನೆ ಎತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ರಚಿಸಿರುವ ಮೂವರು ನ್ಯಾಯಾಧೀಶರ ಸಮಿತಿಯ ಕಾನೂನು ಮಾನ್ಯತೆಯ ಬಗ್ಗೆಯೂ ಅಪಸ್ವರ ಎತ್ತಿರುವ ಉಪ ರಾಷ್ಟ್ರಪತಿಗಳು, ಸಮಿತಿಯು ಏನು ಮಾಡುತ್ತದೆ?, ಹೆಚ್ಚೆಂದರೆ ಶಿಫಾರಸು ಮಾಡಬಹುದು. ಯಾರಿಗೆ ಶಿಫಾರಸು ಮಾಡುತ್ತದೆ. ಏತಕ್ಕಾಗಿ ಈ ಶಿಫಾರಸು. ಸಂವಿಧಾನ ಅಥವಾ ಕಾನೂನಿನ ಯಾವ ನಿಬಂಧನೆಯ ಅಡಿಯಲ್ಲಿ ಸಮಿತಿ ರಚಿಸಲಾಗಿದೆ ಎಂಬುದು ತಿಳಿಯುತ್ತಿಲ್ಲ ಎಂದರು.
ಯಾವುದೇ ಪ್ರಕರಣದ ಪ್ರಾಥಮಿಕ ತನಿಖೆ ನಡೆಸುವುದು ಕಾರ್ಯಾಂಗದ ಅಧಿಕಾರಿ ವ್ಯಾಪ್ತಿಗೆ ಬರುತ್ತದೆಯೇ ಹೊರತು, ನ್ಯಾಯಾಂಗಕ್ಕಲ್ಲ. ನ್ಯಾಯಾಧೀಶರನ್ನು ನೇಮಿಸುವ ಮತ್ತು ಕಿತ್ತುಹಾಕುವ ಅಧಿಕಾರ ಕಾರ್ಯಾಂಗಕ್ಕಿದೆ. ಹೀಗಿದ್ದಾಗ, ಸಮಿತಿಯ ವರದಿಯು ಕಾನೂನಿನ ಮಾನ್ಯತೆಗೆ ಒಳಪಡುತ್ತದೆಯೇ ಎಂದು ಪಶ್ನೆ ಮಾಡಿದ್ದಾರೆ.