ಮಂಗಳೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ 134 ನೇ ಜನ್ಮದಿನಾಚರಣೆ ಸೋಮವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಸಭೆ ಸ್ಪೀಕರ್ ಯು ಟಿ ಖಾದರ್ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ಹಲವಾರು ದೇಶಗಳನ್ನು ಸುತ್ತಿ ಸಂವಿಧಾನವನ್ನು ಅಧ್ಯಯನ ಮಾಡಿ, ನಮ್ಮ ದೇಶಕ್ಕೆ ಬೃಹತ್ ಮತ್ತು ಲಿಖಿತ ಸಂವಿಧಾನವನ್ನು ರಚಿಸಿಕೊಟ್ಟು, ಕೆಳ ವರ್ಗದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಸಮಾನತೆಯ ಹಕ್ಕು ಸಿಗಬೇಕು ಎಂದು ಹೋರಾಟ ನಡೆಸಿ ಯಶಸ್ಸನ್ನು ಕಂಡವರಾಗಿದ್ದಾರೆ. ನಮ್ಮ ದೇಶಕ್ಕೆ ಬೇಕಾಗುವ ರೀತಿಯಲ್ಲಿ ಸಂವಿಧಾನವನ್ನು ರಚಿಸುವಲ್ಲಿ ಶ್ರಮವಹಿಸಿದ್ದಾರೆ ಎಂದು ಸ್ಪೀಕರ್ ಹೇಳಿದರು. ಯಾವುದೇ ಸರಕಾರಗಳು ಡಾ. ಬಿ.ಆರ್ ಅಂಬೇಡ್ಕರ್ ರವರ ಸಂವಿಧಾನಕ್ಕೆ ವಿರುದ್ಧವಾಗಿ ಆಡಳಿತ ನಡೆಸದೆ , ಸಂವಿಧಾನಕ್ಕೆ ಅನುಗುಣವಾಗಿ ಕೆಲಸವನ್ನು ನಿರ್ವಹಿಸಿದಾಗ ಮಾತ್ರ ಕ್ಷೇತ್ರ ಅಥವಾ ಜಿಲ್ಲೆ ಸುವ್ಯವಸ್ಥೆ ಶಾಂತಿಯಿಂದ ಇರುತ್ತದೆ.ಸಂವಿಧಾನಕ್ಕೆ ಅನುಗುಣವಾಗಿ ಆಡಳಿತ ನಡೆಸಿದರೆ ಮಾತ್ರ ದೇಶ ಬಲಿಷ್ಟವಾಗುತ್ತದೆ. ಅವರು ರಚಿಸಿದಂತಹ ಸಂವಿಧಾನ ದೇಶದ ಎಲ್ಲಾ ಸಮಸ್ಯೆಗಳ ಔಷಧದ ಗ್ರಂಥ ಎಂದು ಸ್ಪೀಕರ್ ಹೇಳಿದರು.
ಸಂವಿಧಾನವನ್ನು ಅರ್ಥೈಸಿಕೊಂಡು ಓದಿಕೊಂಡು ಪಾಲಿಸುವುದು ಭಾರತ ದೇಶದ ಪ್ರಜೆಯ ಜವಾಬ್ದಾರಿ. ಪ್ರತಿಯೊಬ್ಬ ನಾಗರಿಕನು ಸಂವಿಧಾನವನ್ನು ಗೌರವಿಸಬೇಕು ಎಂದು ಅವರು ಹೇಳಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಎಲ್ಲಾ ಅವಮಾನ ತಿರಸ್ಕಾರ ನಿಂದನೆಗಳನ್ನು ಸಹಿಸಿಕೊಂಡು ಯಶಸ್ಸಿನ ಹಾದಿ ಹಿಡಿದವರು. ಅದೇ ರೀತಿ ನಾವು ಕೂಡ ಯಾರು ಎಷ್ಟೇ ನಿಂದಿಸಿದರು , ಅವಮಾನಿಸಿದರು ಸಹಿಸಿಕೊಂಡು ತಾಳ್ಮೆಯಿಂದ ಯಶಸ್ಸಿನತ ಹೆಜ್ಜೆ ಇಡಬೇಕು ಇಂದು ಸ್ಪೀಕರ್ ಹೇಳಿದರು. ಅಂಬೇಡ್ಕರ್ ಅವರ ಜೀವನ ಚರಿತ್ರೆ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.
ಲೋಕಸಭೆ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವ, ನಡೆ ನುಡಿ ನಡವಳಿಕೆ ಮತ್ತು ಅವರ ಜೀವನಕ್ಕೆ ಗೌರವವನ್ನು ನೀಡಬೇಕು. ಅವರ ಭಾವಚಿತ್ರ ಮತ್ತು ಪ್ರತಿಮೆಗೆ ಗೌರವ ನೀಡುವುದು ಮಾತ್ರವಲ್ಲದೆ ಅವರ ವ್ಯಕ್ತಿತ್ವ ಮತ್ತು ಚಿಂತನೆಗಳು ನಮ್ಮ ಮುಂದಿನ ಪೀಳಿಗೆ ಪಾಲಿಸಬೇಕು ಎಂದು ಅವರು ಹೇಳಿದರು. ಬಾಬಾ ಸಾಹೇಬರ ಜೀವನವನ್ನು ಓದಿಕೊಂಡು, ಅರ್ಥೈಸಿಕೊಂಡು, ಅವರ ಮೌಲ್ಯ, ತತ್ವಗಳ,ಆದರ್ಶಗಳ ಆಧಾರದಲ್ಲಿ ಬದುಕಬೇಕು ಎಂದು ಅವರು ಹೇಳಿದರು.
ಕರ್ನಾಟಕ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಮಾತನಾಡಿ, ಡಾ. ಬಿಆರ್ ಅಂಬೇಡ್ಕರ್ ಅವರ ಜೀವನ ಪದ್ಧತಿ, ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ ಎಂದು ಹೇಳಿದರು. ಡಾ. ಬಿಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಹಾಗೂ ದೇಶದ ಕಾನೂನನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಪೊಲೀಸ್ ಅಧೀಕ್ಷಕ ಯತೀಶ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಮ್ ಸ್ಟಾನ್ಲಿ ಅಲ್ವಾರಿಸ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ್ ಗಟ್ಟಿ ಕೆ ಮತ್ತಿತರರು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಡಾ ಬಿ ಎಸ್ ಹೇಮಲತಾ ಸ್ವಾಗತಿಸಿ, ಸಹಾಯಕ ನಿರ್ದೇಶಕ ಸುರೇಶ್ ಅಡಿಗ ವಂದಿಸಿದರು.