image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಹು ಚರ್ಚಿತ ಜಾತಿ ಸಮೀಕ್ಷೆ ಬಗ್ಗೆ ಅಧಿಕೃತ ಮಾಹಿತಿಗಳನ್ನು ಹಂಚಿಕೊಂಡ ರಾಜ್ಯ ಸರಕಾರ

ಬಹು ಚರ್ಚಿತ ಜಾತಿ ಸಮೀಕ್ಷೆ ಬಗ್ಗೆ ಅಧಿಕೃತ ಮಾಹಿತಿಗಳನ್ನು ಹಂಚಿಕೊಂಡ ರಾಜ್ಯ ಸರಕಾರ

ಬೆಂಗಳೂರು: ಬಹು ಚರ್ಚಿತ ಜಾತಿ ಸಮೀಕ್ಷೆ ಬಗ್ಗೆ ರಾಜ್ಯ ಸರಕಾರವು ಕೆಲವು ಅಧಿಕೃತ ಮಾಹಿತಿಗಳನ್ನು ಹಂಚಿಕೊಂಡಿದೆ. ಸಾಮಾನ್ಯ ಸಂಗತಿಗಳ ವಿವರಗಳನ್ನು ಮಾತ್ರ ನೀಡಿದ್ದು ರಾಜ್ಯದ ಜನತೆ ಕುತೂಹಲದಿಂದ ನಿರೀಕ್ಷಿಸುತ್ತಿರುವ ಜಾತಿವಾರು ಜನಸಂಖ್ಯೆಯ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದೇ ಗೌಪ್ಯತೆಯನ್ನ ಕಾಪಾಡಿಕೊಳ್ಳುತ್ತಿದೆ. ಈ ಬಗ್ಗೆ ಇದೇ ತಿಂಗಳ 17ರಂದು ಜಾತಿ ಗಣತಿ ಸಮೀಕ್ಷೆ ಬಗ್ಗೆಯೇ ಚರ್ಚಿಸಲು ವಿಶೇಷವಾಗಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ವಿವರಗಳನ್ನು ಪ್ರಸ್ತಾಪಿಸಿ ನಿರ್ಣಯ ತಗೆದುಕೊಳ್ಳುವ ಸಾಧ್ಯತೆಗಳಿವೆ.

ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕೆಲವು ವಿವರಗಳನ್ನು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿದೆ. ಆ ಪ್ರಕಾರ ರಾಜ್ಯದ 6.35 ಕೋಟಿ ಜನಸಂಖ್ಯೆಯಲ್ಲಿ 5.98 ಕೋಟಿ ಜನರ ಸಮೀಕ್ಷೆ ನಡೆಸಲಾಗಿದೆ. 1.35 ಕೋಟಿ ಕುಟುಂಬಗಳು ಶೇ 94.17 ರಷ್ಟು ಮಾಹಿತಿ ಸಂಗ್ರಹಣೆಯಲ್ಲಿ ಪಾಲ್ಗೊಂಡಿವೆ. 37 ಲಕ್ಷ ಕುಟುಂಬಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿಲ್ಲ ಎಂದು ಸಚಿವರು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ತಿಳಿಸಿದ್ದಾರೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯಾದ್ಯಂತ ನಡೆಸಿದ ಸಾಮಾಜಿಕ , ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ದಿನಾಂಕ: 29.02.2024ರಂದು ಸರಕಾರಕ್ಕೆ ಸಲ್ಲಿಸಿದೆ. ಈ ವರದಿಯನ್ನು 54 ಮಾನದಂಡಗಳಿಗೆ ಅನುಗುಣವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ದತ್ತಾಂಶಗಳ ಅಧ್ಯಯನ ಅನುಸಾರವಾಗಿ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ಅಂಕಿ-ಅಂಶಗಳನ್ನು ಒಳಗೊಂಡ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿತ್ತು.

ಹೆಚ್.ಕಾಂತರಾಜ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು 2015ರ ಏಪ್ರಿಲ್ 11ರಿಂದ ಪ್ರಾರಂಭಿಸಿ, 2015ರ ಮೇ 30ರಂದು ಪೂರ್ಣಗೊಳಿಸಿರುತ್ತದೆ.

ಜಾತಿ ಗಣತಿ ಸಮೀಕ್ಷೆಯ ಸಂದರ್ಭದಲ್ಲಿ ಪ್ರತಿಯೊಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ ಆರ್ಥಿಕ, ರಾಜಕೀಯ ಪ್ರಾತಿನಿಧ್ಯ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಬಗ್ಗೆ 54 ಮಾನದಂಡಗಳ ಕುರಿತು ಕುಟುಂಬದ ಅನುಸೂಚಿ-3ರಲ್ಲಿ ಮಾಹಿತಿಯನ್ನು ಸಂಗ್ರಹಿಸಲಾಗಿರುತ್ತದೆ. ಸಮೀಕ್ಷೆಯಲ್ಲಿ ಲಭ್ಯವಾಗಿರುವ ಅಂಕಿ-ಅಂಶಗಳನ್ನು ಆಯಾ ಜಿಲ್ಲೆಗಳಲ್ಲಿಯೇ ಗಣಕೀಕರಣಗೊಳಿಸಲಾಗಿದೆ. ಬಿಇಎಲ್ ಸಂಸ್ಥೆ ಜೊತೆ ಗಣಕೀಕರಣಕ್ಕಾಗಿ ರೂ.43.09 ಕೋಟಿಗಳ ಒಡಂಬಡಿಕೆ ಮಾಡಿಕೊಳ್ಳಲಾಗಿರುತ್ತದೆ. 2015ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಕೇಂದ್ರ ಸರ್ಕಾರದಿಂದ ರೂ.7.00 ಕೋಟಿ ಮತ್ತು ರಾಜ್ಯ ಸರ್ಕಾರದಿಂದ ರೂ.185.79 ಕೋಟಿ ಸೇರಿದಂತೆ ಒಟ್ಟು ರೂ.192.79 ಕೋಟಿ ಬಿಡುಗಡೆ ಮಾಡಲಾಗಿರುತ್ತದೆ.

 

Category
ಕರಾವಳಿ ತರಂಗಿಣಿ