ಮಂಗಳೂರು: ಮಂಗಳೂರು-ಕಬಕಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ಜಂಕ್ಷನ್‌ಗೆ ವಿಸ್ತರಿಸುವುದಕ್ಕೆ ರೈಲ್ವೆ ಮಂಡಳಿ ಈಗಾಗಲೇ ಮಂಜೂರಾತಿ ನೀಡಿದ್ದು, ಎ.12ರಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಸಂಜೆ 4 ಗಂಟೆಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಅವರು ನಗರದ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿ, ಕಳೆದ ಒಂದು ದಶಕದಿಂದ ಬೇಡಿಕೆಯಾಗಿ ಉಳಿದಿದ್ದ ಮಂಗಳೂರು- ಕಬಕ-ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರಸ್ತೆಗೆ ವಿಸ್ತರಿಸುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿರುವ ರೈಲ್ವೆ ಸಚಿವಾಲಯದ ಕ್ರಮವನ್ನು ಶ್ಲಾಘಿಸಿ ಸಚಿವರಿಗೆ ದಕ್ಷಿಣ ಕನ್ನಡ ಜಿಲ್ಲೆ ಜನತೆಯ ಪರವಾಗಿ ವಿಶೇಷ ಧನ್ಯವಾದವನ್ನು ಸಲ್ಲಿಸಿದ್ದಾರೆ.
ಮತ್ತಷ್ಟು ಯೋಜನಗೆ ಸಂಬಂಧಿಸಿದಂತೆ ಬಹಳ ಜರೂರಾಗಿ ಆಗಬೇಕಾಗಿರುವ ಈ ಶಿರಾಡಿ ಘಾಟಿ ಯೋಜನೆ ಬಾಕಿಯಿರುವ ಆಡಳಿತಾತ್ಮಕ ಅನುಮತಿಗಳನ್ನು ಆದಷ್ಟು ಬೇಗ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡುತ್ತೇನೆ. ಈ ಯೋಜನೆ ಪೂರ್ಣಗೊಂಡರೆ, ಪ್ರವಾಸೋದ್ಯಮ, ವ್ಯಾಪಾರ-ವಹಿವಾಟು, ಕೈಗಾರಿಕೆಗಳ ಅಭಿವೃದ್ಧಿಯ ಜತೆಗೆ ಔದ್ಯೋಗಿಕವಾಗಿ ಮತ್ತು ಆರ್ಥಿಕ ಬೆಳವಣಿಗೆಗೂ ಕರಾವಳಿ-ಮಲೆನಾಡು ಭಾಗಕ್ಕೆ ಹೆಚ್ಚಿನ ಅನುಕೂಲ ವಾಗಲಿದೆ ಎಂದಿದ್ದಾರೆ. ಶಿರಾಡಿ ಘಾಟಿ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಹಾಲಿ ಡಿಪಿಆರ್ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಪೆರಿಯಶಾಂತಿ-ಉಜಿರೆ, ಗುರುವಾಯನಕೆರೆ ಬಜಗೋಳಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆಗೆ ಕೇಂದ್ರ ಸಚಿವ ಗಡ್ಕರಿಯವರಿಗೆ ಮನವಿ ಸಲ್ಲಿಸಲಾಗಿದೆ. ಸುರತ್ಕಲ್-ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಬಂದರು ಸಂಪರ್ಕ ರಸ್ತೆಯಾಗಿ ಅಭಿವೃದ್ಧಿ ಪಡಿಸಲು 26 ಕೋಟಿ ಮಂಜೂರಾಗಿದ್ದು, ಟೆಂಡರ್ ಆಗಿದೆ ಮಳೆಗಾಲದ ಮೊದಲು ಕಾಮಗಾರಿ ಪೂರ್ಣ ವಾಗಲಿದೆ ಮತ್ತು ಇದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಿಸಲು ಸಚಿವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ವಿಮಾನ ನಿಲ್ದಾಣದ ಅಭಿವೃದ್ಧಿಗೆ 45 ಎಕರೆ ಜಾಗದಲ್ಲಿ ಅದಾನಿ ಸಂಸ್ಥೆಯ ಸಹಯೋಗದ ಮೂಲಕ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ವೇದವ್ಯಾಸ ಕಾಮತ್ ಬಿಜೆಪಿ ಪದಾಧಿಕಾರಿಗಳಾದ ಪ್ರೇಮಾನಂದ ಶೆಟ್ಟಿ, ಸಂಜಯ ಪ್ರಭು, ಅರುಣ್ ರಾಜ್, ಮೋಹನ್ ಶೇಟ್, ವಸಂತ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.