ಮಂಗಳೂರು: ರಾಜ್ಯದಲ್ಲಿ ಹಿಂದೂಗಳಿಗೆ ಅಪಮಾನ ಮಾಡುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ಕೊಡಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಅವರು ನಗರದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿ, ಬಜೆಟ್‌ನಲ್ಲಿ ಮುಸ್ಲಿಮರಿಗೆ ಮೀಸಲಾತಿ ಕೊಡುವ ಈ ರಾಜ್ಯದ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ಐವತ್ತಕ್ಕೂ ಅಧಿಕ ವಸ್ತುಗಳ ಬೆಲೆ ಏರಿಕೆ ಅಗಿದೆ.
ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಅಲ್ಲ, ಕಾಂಗ್ರೆಸ್ ಮುಖ್ಯಮಂತ್ರಿ. ಇಂಥಹ ಹಿಂದೂ ವಿರೋಧಿ ಸರ್ಕಾರವನ್ನು ಬಿಜೆಪಿ ಕಾರ್ಯಕರ್ತರು ಖಂಡಿತಾ ಕಿತ್ತು ಹಾಕುತ್ತಾರೆ ಎಂದರು. ಕರ್ನಾಟಕದಲ್ಲಿ ಜನವಿರೋಧಿ ಮತ್ತು ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರವಿದೆ. ರಾಜ್ಯದ ಮುಖ್ಯಮಂತ್ರಿಯಾದ ಮೇಲೆ ಎಷ್ಟು ಬಾರಿ ಮಂಗಳೂರಿಗೆ ಭೇಟಿ ಕೊಟ್ಟರು, ಎಷ್ಟು ಅನುದಾನ ಕೊಟ್ಟರು ಎಂದು ಪ್ರಶ್ನಿಸಿದರು. ಯಡಿಯೂರಪ್ಪ ಸಿಎಂ ಆಗಿದ್ದಾಗ ದ.ಕ ಜಿಲ್ಲೆಗೆ 19500 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ದ.ಕ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿ ಇಲ್ಲವೇ? ಸ್ಪೀಕರ್ ಒಬ್ಬರು ಇದ್ದಾರೆ, ನಮ್ಮ ಶಾಸಕರು ಪ್ರತಿಭಟನೆ ಮಾಡಿದರೆ ಅಮಾನತು ಮಾಡ್ತಾರೆ.
ಕಾನೂನುಬಾಹಿರವಾಗಿ ನಮ್ಮನ್ನು ಹೊರಗಡೆ ಓಡಿಸಿದ್ದಾರೆ ಎಂದು ವಿಜಯೇಂದ್ರ ಹೇಳಿದರು. ಇದೇ ಸಂದರ್ಭದಲ್ಲಿ ಶ್ರೀರಾಮುಲು ಮಾತನಾಡಿ, ಬಿಜೆಪಿ ಸರಕಾರವಿದ್ದಾಗ ಹಿಂದೂ ಕಾರ್ಯಕರ್ತರ ಕೇಸ್ ತೆಗೆದು ಹಾಕಲಾಗಲಿಲ್ಲ. ಆದರೆ ಕಾಂಗ್ರೆಸ್ ತಮ್ಮ ಸರಕಾರ ಬಂದಾಗ ಅವರ ಕಾರ್ಯಕರ್ತರ ಕೇಸ್ ತೆಗೆದು ಹಾಕಿದೆ. ಆದ್ದರಿಂದ ನಮ್ಮ ಸರ್ಕಾರ ಮುಂದೆ ಬಂದಾಗ ಹಿಂದೂ ಕಾರ್ಯಕರ್ತರ ಎಲ್ಲ ಕೇಸ್ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿ ಜೊತೆ ಕಾಂಗ್ರೆಸ್ ಓಡುತ್ತಿದೆ. ಕಾಂಗ್ರೆಸ್ ಸರ್ಕಾರ ಜೀವಕ್ಕೆ ಬೆಲೆ ಇಲ್ಲದಂತೆ ವರ್ತಿಸುತ್ತಿದೆ. ಜಿಹಾದಿಗಳು ಎದ್ದು ನಿಂತು ಹಿಂದೂಗಳನ್ನು ಮುಗಿಸುವ ಕೆಲಸ ಮಾಡುತ್ತಿದೆ. ಹಿಂದೂ ಕಾರ್ಯಕರ್ತರ ಮೇಲೆ ಒತ್ತಡ ತಂದು ಆತ್ಮಹತ್ಯೆ ಮಾಡುವಂತೆ ಮಾಡುತ್ತಿದೆ. ಆದ್ದರಿಂದ ಬಿಜೆಪಿ ಕಾರ್ಯಕರ್ತರು ಯಾವುದೇ ಕಾರಣಕ್ಕೆ ಅಧೀರರಾಗಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ನಿಮ್ಮೊಂದಿಗೆ ನಾವಿದ್ದೇವೆ ಎಂದು ಶ್ರೀರಾಮುಲು ಕರೆಕೊಟ್ಟರು.
ಬಿಜೆಪಿ ಜನಾಕ್ರೋಶ ಯಾತ್ರೆಯು ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್‌ವರೆಗೆ ಬೃಹತ್ ಪಾದಯಾತ್ರೆ ನಡೆಯಿತು. ಬಳಿಕ ಕ್ಲಾಕ್ ಟವರ್ ಮುಂಭಾಗ ನಡೆದ ಜನಾಕ್ರೋಶ ಸಮಾವೇಶ ನಡೆಯಿತು. ಈ ಸಭೆಯಲ್ಲಿ ಬಿಜೆಪಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಿಎಂ ಸದಾನಂದ ಗೌಡ ಸೇರಿದಂತೆ ದ.ಕ ಜಿಲ್ಲೆಯ ಬಿಜೆಪಿ ಶಾಸಕರು, ಸಂಸದ ಹಾಗೂ ಕಾರ್ಯಕರ್ತರು ಭಾಗಿಯಾದರು.