ನವದೆಹಲಿ: ಸಂಸತ್ತಿನ ಎರಡೂ ಸದನದಲ್ಲಿ ವಕ್ಫ್ ತಿದ್ದುಪಡಿ(waqf amendment ) ಮಸೂದೆ ಅಂಗೀಕಾರವಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ(narendra modi), ಇದೊಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಹಿಂದುಳಿದ ಕೆಲವರಿಗೆ ಇದು ಧ್ವನಿ ನೀಡಲಿದ್ದು, ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲಿದೆ ಎಂದಿದ್ದಾರೆ.
ಸದ್ಯ ಥಾಯ್ಲೆಂಡ್(Thailand) ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ''ಸಂಸತ್ತಿನ ಎರಡೂ ಸದನದಲ್ಲಿ ಮಸೂದೆ ಅಂಗೀಕರವಾಗಿರುವುದು ಸಾಮಾಜಿಕ-ಆರ್ಥಿಕ ನ್ಯಾಯ, ಪಾರದರ್ಶಕತೆ ಮತ್ತು ಸಮಗ್ರ ಬೆಳವಣಿಗೆಯ ಅನ್ವೇಷಣೆಯಲ್ಲಿ ಮಹತ್ವದ ಕ್ಷಣವಾಗಿದೆ. ಇದು ದೀರ್ಘಕಾಲದಿಂದ ತೊಂದರೆಯಲ್ಲಿರುವವರ ಧ್ವನಿಯಾಗಲಿದ್ದು, ಅವಕಾಶದಿಂದ ವಂಚಿತರಾದವರಿಗೆ ನೆರವಾಗಲಿದೆ'' ಎಂದು ತಿಳಿಸಿದ್ದಾರೆ.
2019ರ ತ್ರಿವಳಿ ತಲಾಖ್(trivali thalakh) ಬಳಿಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಸ್ಲಿಂ ಸಮುದಾಯದಲ್ಲಿ ಕೈಗೊಂಡ ಎರಡನೇ ದೊಡ್ಡ ಬದಲಾವಣೆ ಇದಾಗಿದೆ. ಮುಸ್ಲಿಮರಲ್ಲಿ ಬಡವರಿಗೆ ಸಹಾಯ ಮಾಡುವ ಗುರಿಯೊಂದಿಗೆ ಸುಧಾರಣೆ ಮಾಡಲು ವಕ್ಫ್ ಮಸೂದೆ ತಿದ್ದುಪಡಿ ಮಾಡುವುದಾಗಿ ಪ್ರಧಾನಿ ತಿಳಿಸಿದ್ದರು. ಅಲ್ಲದೇ, ಈ ಮಸೂದೆಯು ಸಮುದಾಯದ ವಿರುದ್ಧವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.
''ದಶಕಗಳಿಂದ ವಕ್ಫ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಮೌಲ್ಯಮಾಪನದ ಕೊರತೆ ಇದೆ. ಇದರಿಂದಾಗಿ, ಬಡ ಮುಸ್ಲಿಮರು, ಮುಸ್ಲಿಂ ಮಹಿಳೆಯರು ಮತ್ತು ಪಸ್ಮಂದಾ ಮುಸ್ಲಿಮರ ಹಿತಾಸಕ್ತಿಗಳಿಗೆ ಹಾನಿಯಾಗುತ್ತಿದೆ. ಸಂಸತ್ತು ಅಂಗೀಕರಿಸಿದ ಶಾಸನವು ಪಾರದರ್ಶಕತೆಯನ್ನು ಹೆಚ್ಚಿಸಲಿದ್ದು, ಜನರ ಹಕ್ಕನ್ನು ರಕ್ಷಿಸುತ್ತದೆ'' ಎಂದರು.
ಈ ಮಸೂದೆಗೆ ಇದೀಗ ರಾಷ್ಟ್ರಪತಿಗಳ(president) ಸಹಿ ಬೇಕಿದ್ದು, ಇದಾದ ಬಳಿಕ ಕಾನೂನು ಆಗಲಿದ್ದು, ಇದು ಸಾಮಾಜಿಕ ನ್ಯಾಯಕ್ಕೆ ಸೂಕ್ಷ್ಮ ಕಾಲಕ್ಕೆ ಮುನ್ನುಡಿಯಾಗಲಿದೆ. ದೇಶದ ಪ್ರತಿ ನಾಗರೀಕರ ಘನತೆಗೆ ಆದ್ಯತೆ ನೀಡಲು ನಾವು ಬದ್ದವಾಗಿದ್ದೇವೆ. ಎಲ್ಲರನ್ನೊಳಗೊಂಡ, ಬಲಿಷ್ಠ, ಸಹಾನುಭೂತಿಯ ಭಾರತವನ್ನು ಹೀಗೆ ನಿರ್ಮಾಣ ಮಾಡುತ್ತೇವೆ ಎಂದು ಮೋದಿ ತಿಳಿಸಿದ್ದಾರೆ.
ಮಸೂದೆ ಪ್ರಕಾರ, ಇಬ್ಬರು ಮಹಿಳೆಯರು ಸೇರಿದಂತೆ ಗರಿಷ್ಠ ನಾಲ್ಕು ಮಂದಿ ಮುಸ್ಲಿಮೇತರ ಸದಸ್ಯರು ವಕ್ಫ್ ಮಂಡಳಿಯಲ್ಲಿರಬೇಕು. ಈ ಆಸ್ತಿ ಸರ್ಕಾರಕ್ಕೆ ಅಥವಾ ವಕ್ಫ್ಗೆ ಸೇರುತ್ತದೆಯಾ ಎಂಬ ಬಗ್ಗೆ ಜಿಲ್ಲಾಧಿಕಾರಿಗಿಂತ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ನಿರ್ಧರಿಸಲಿದ್ದಾರೆ.