ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಹಾದು ಹೋಗುವ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯುದ್ದಕ್ಕೂ ಗುಂಡು ಹಾರಿಸುವ ಮೂಲಕ ಪಾಕಿಸ್ತಾನ ಸೇನೆ ಮಂಗಳವಾರ ಮಧ್ಯಾಹ್ನ ಕದನ ವಿರಾಮ ಉಲ್ಲಂಘಿಸಿದೆ. ಈ ಅಪ್ರಚೋದಿತ ದಾಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಪಾಕಿಸ್ತಾನದ ದಾಳಿಯಿಂದ ಭಾರತದ ಸೇನೆಯಲ್ಲಿ ಸಂಭವಿಸಿರುವ ಸಾವು, ನೋವುಗಳ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಎರಡೂ ಕಡೆಯಲ್ಲಿ ಗುಂಡಿನ ದಾಳಿ ಮತ್ತು ಸ್ಪೋಟಗಳು ಸಂಭವಿಸಿದ್ದು ಐವರು ಪಾಕ್ ಸೈನಿಕರು ಗಾಯಗೊಂಡಿದ್ದಾರೆ ಎಂದು ಭಾರತೀಯ ಸೇನೆಯ ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
ಈ ಕುರಿತು ಹೇಳಿಕೆ ಪ್ರಕಟಿಸಿರುವ ಜಮ್ಮುವಿನ ರಕ್ಷಣಾ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್, "ಎಲ್‌ಒಸಿಯ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಪಾಕ್ ಸೇನೆ ಒಳನುಸುಳಿದೆ. ಬಳಿಕ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸಿದೆ. ಇದಕ್ಕೆ ನಮ್ಮ ಸೇನೆ ತಕ್ಕ ಪ್ರತ್ಯುತ್ತರ ನೀಡಿ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದೆ" ಎಂದು ತಿಳಿಸಿದ್ದಾರೆ.