ಮಂಗಳೂರು: ಕೇವಲ 20 ತಿಂಗಳಲ್ಲಿ ಮೂರನೇ ಬಾರಿ ಹಾಲಿನ ದರ ಏರಿಕೆ ಮಾಡಿದೆ.ಈ ಸರ್ಕಾರ ಹಾಲಿನ ದರವನ್ನು ₹9 ಏರಿಕೆ ಮಾಡಿದ್ದು ನಿಜವಾಗಿಯೂ ಹೈನುಗಾರಿಕೆಯನ್ನೇ ನಂಬಿರುವ ರೈತರಿಗೆ ದರ ಏರಿಕೆಯ ಲಾಭ ಹೋದರೆ ಯಾರೂ ವಿರೋಧ ಮಾಡುವುದಿಲ್ಲ. ಆದರೆ ಪ್ರತೀ ಬಾರಿಯೂ ರೈತರ ಹೆಸರಿನಲ್ಲಿ ಹಾಲಿನ ಬೆಲೆ ಏರಿಕೆ ಮಾಡಿ ಜನಸಾಮಾನ್ಯರನ್ನು ಲೂಟಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ, ವಾಸ್ತವದಲ್ಲಿ ಹಾಲು ಉತ್ಪಾದಕರಿಗೆ ಸೇರಬೇಕಾಗಿದ್ದ 650 ಕೋಟಿಗೂ ಅಧಿಕ ಪ್ರೋತ್ಸಾಹ ಧನವನ್ನೇ ಇನ್ನೂ ಬಾಕಿ ಉಳಿಸಿಕೊಂಡಿದೆ. ರೈತರ ಹೆಸರಿನಲ್ಲಿ ಇವರು ನಮ್ಮನ್ನು ಲೂಟಿ ಮಾಡುತ್ತಿದ್ದಾರೆ ಎಂಬ ಭಾವನೆ ಜನಸಾಮಾನ್ಯರಲ್ಲಿ ದಟ್ಟವಾಗುತ್ತಿದ್ದು ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ವಿಶ್ವಾಸವನ್ನು ಕಳೆದುಕೊಂಡಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಕಿಡಿ ಕಾರಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಗೃಹ ಬಳಕೆ ವಿದ್ಯುತ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿ ಜನರಿಗೆ ಶಾಕ್ ನೀಡಿದೆ. ಗೃಹ ಬಳಕೆ ವಿದ್ಯುತ್‌ನ ಪ್ರತಿ ಯೂನಿಟ್ ದರದಲ್ಲಿ 10 ಪೈಸೆ ಇಳಿಕೆ ಮಾಡಿದ್ದೇವೆ ಎನ್ನುವ ಇವರು, ಗ್ರಾಹಕರಿಗೆ ಮಂಜೂರಾದ ಪ್ರತಿ ಕೆ.ವಿಗೆ ₹25 ಏರಿಕೆ ಮಾಡಿದ್ದಾರೆ. ಒಂದು ಕಡೆ ಉಚಿತ ಕರೆಂಟ್ ಎನ್ನುತ್ತಾ, ಇನ್ನೊಂದು ಕಡೆ ಕರೆಂಟ್ ದರ ಹೆಚ್ಚಿಸುತ್ತಾ ಬಂದ ಕಾಂಗ್ರೆಸ್ ಸರ್ಕಾರದ ಮಹಾ ಮೋಸ ಇದೀಗ ಎಲ್ಲರಿಗೂ ಅರಿವಾಗಿದೆ.
ಇನ್ನೂ ಬಗೆಹರಿಯದ ಬಿಪಿಎಲ್ ಕಾರ್ಡ್ ಸಮಸ್ಯೆ:- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಇದುವರೆಗೂ ಯಾವುದೇ ಹೊಸ BPL ಕಾರ್ಡ್ ನೀಡಲು ಕ್ರಮವಹಿಸಿಲ್ಲ. ನಮ್ಮ ಜಿಲ್ಲೆಯಲ್ಲೇ ಸುಮಾರು ಸಾವಿರಾರು ಜನರು ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿ ಈವರೆಗೂ ಕಾಯುತ್ತಿದ್ದರೂ ಸರ್ಕಾರ ಜವಾಬ್ದಾರಿ ಮರೆತಿದೆ. BPL ಕಾರ್ಡ್ ನ ಎಲ್ಲಾ ಸಮಸ್ಯೆ ಬಗೆ ಹರಿದಿದೆ ಎಂದು ಹೇಳುವ ಸರ್ಕಾರಕ್ಕೆ ಕ್ಷೇತ್ರದ ತಳಮಟ್ಟದ ಅರಿವಿಲ್ಲ. ಆರೋಗ್ಯ ಸಂಬಂಧಿ ಖಾಯಿಲೆಗಳಿಂದ ಬಳಲುತ್ತಿರುವವರಂತೂ ಬಿಪಿಎಲ್ ಕಾರ್ಡ್ ಇಲ್ಲದೇ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ನಿಮ್ಮ ಗ್ಯಾರೆಂಟಿ ಯೋಜನೆಗಳೇ ನಮಗೆ ಬೇಡ, ದಯವಿಟ್ಟು ನಮಗೆ ಬಿಪಿಎಲ್ ಕಾರ್ಡ್ ಗಳನ್ನು ಕೊಡಿ, ಎಂದು ಮಾಧ್ಯಮಗಳ ಮುಂದೆ ಬಡ ಜನರೇ ಕಣ್ಣೀರು ಹಾಕಿರುವುದನ್ನು ಇಡೀ ರಾಜ್ಯವೇ ನೋಡಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬಹುತೇಕ ಯೋಜನೆಗಳಿಗೆ ಅರ್ಹರಾಗಲು ಬಿಪಿಎಲ್ ಕಾರ್ಡ್ ಕಡ್ಡಾಯ. ಈಗ ಅಂತಹ ಬಿಪಿಎಲ್ ಕಾರ್ಡುಗಳನ್ನೇ ರದ್ದು ಮಾಡಿ ಸರ್ಕಾರ ಗ್ಯಾರಂಟಿ ಯೋಜನೆಯಿಂದ ಆಗುತ್ತಿದ್ದ ನಷ್ಟವನ್ನು ಸರಿದೂಗಿಸಿಕೊಳ್ಳಲು ಹೊರಟಿದೆ. ಈ ಕೂಡಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಎಲ್ಲಾ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ ಎಂದರು.