image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದರ್ಶನ್‌ಗೆ ಸ್ವಂತ ಬುದ್ಧಿ ಕಡಿಮೆ, ಮೂರನೇಯವರ ಮಾತು ಕೇಳುವುದು ಜಾಸ್ತಿ

ದರ್ಶನ್‌ಗೆ ಸ್ವಂತ ಬುದ್ಧಿ ಕಡಿಮೆ, ಮೂರನೇಯವರ ಮಾತು ಕೇಳುವುದು ಜಾಸ್ತಿ

ಚಿತ್ರದುರ್ಗ ನಿವಾಸಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​​, ಸ್ನೇಹಿತೆ ಪವಿತ್ರಾ ಗೌಡ ಸೇರಿ ಹಲವರು ಅರೆಸ್ಟ್ ಆಗಿದ್ದು, ತನಿಖೆ ನಡೆಯುತ್ತಿದೆ. ಈ ಕುರಿತು ಕಳೆದ ವಾರ ಮೌನವಹಿಸಿದ್ದ ಕನ್ನಡ ಚಿತ್ರರಂಗದ ಗಣ್ಯರು ಇದೀಗ ಒಬ್ಬೊಬ್ಬರಾಗಿ ಪ್ರತಿಕ್ರಿಯಿಸುತ್ತಿದ್ದಾರೆ. 'ಚಿಂಗಾರಿ' ಚಿತ್ರದ ನಿರ್ಮಾಪಕ ಮಹಾದೇವ ಅವರು ದರ್ಶನ್ ಕುರಿತು 'ಈಟಿವಿ ಭಾರತ'ದ ಜೊತೆ ಮಾತನಾಡಿದ್ದಾರೆ.

''ಚಿಂಗಾರಿ ಸಿನಿಮಾಗೆ ಹಾಕಿದ್ದ ಬಂಡವಾಳ ನನಗೆ ವಾಪಸ್ ಬಂದಿತ್ತು. ಚಿತ್ರೀಕರಣದ ಸಮಯದಲ್ಲಿ ದರ್ಶನ್ ವಿನಯದಿಂದ ವರ್ತಿಸಿದ್ದರು‌. ಸಿನಿಮಾ ಶೂಟಿಂಗ್ ಪೂರ್ಣಗೊಂಡು, ಅಂದುಕೊಂಡಂತೆ ರಿಲೀಸ್ ಆಗಿತ್ತು. ಕಮರ್ಷಿಯಲ್ ಸಿನಿಮಾವಾದ ಕಾರಣ ಚಿತ್ರ ಕೂಡ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಆಗ ಯಾರೋ ಮೂರನೇ ವ್ಯಕ್ತಿಯ ಮಾತು ಕೇಳಿ,‌ ನನಗೆ ಇಂತಿಷ್ಟು ಹಣ ಕೊಡಿ ಎಂದು ದರ್ಶನ್‌ ಕೇಳಿದಾಗ ನಮ್ಮ ನಡುವೆ ವಾಗ್ವಾದ ನಡೆದಿತ್ತು.

ಕೊನೆಗೆ ಅವರು ಹೇಳಿದಂತೆ ಒಂದಿಷ್ಟು ಹಣ ಕೊಡಬೇಕಾಯಿತು. ಆ ನಂತರ ನಮ್ಮ ಕುಟುಂಬದವರು ನೀವೇಕೆ ಸಿನಿಮಾ ಮಾಡಿದ್ರಿ ಎಂದು ಕೇಳಿದಾಗ ಮನಸ್ಸಿಗೆ ಬಹಳ ನೋವಾಗಿತ್ತು.'' - ನಿರ್ಮಾಪಕ ಮಹಾದೇವ.

"ನಾನು ಗಮನಿಸಿದಂತೆ, ದರ್ಶನ್ ಅವರಿಗೆ ಸ್ವಂತ ಬುದ್ಧಿ ಕಡಿಮೆ. ಅವರು ಹೆಚ್ಚಾಗಿ ಮೂರನೇ ವ್ಯಕ್ತಿಗಳ ಮಾತು ಕೇಳುತ್ತಾರೆ. ಆ ಸಂದರ್ಭದಲ್ಲಿ ನಾನು‌ ಕೂಡ ಸಾಕಷ್ಟು ಬಾರಿ ಹೇಳಿದ್ದೆ. ದರ್ಶನ್ ಮಾಡಿಕೊಳ್ಳುತ್ತಿದ್ದ ವಿವಾದಗಳ ಬಗ್ಗೆ ಅವರಿಗೆ ಬುದ್ಧಿ ಹೇಳುವವರು ಯಾರೂ ಇಲ್ಲ. ಹಾಗಾಗಿಯೇ ತಪ್ಪಾಗಿದೆ. ದರ್ಶನ್ ಹೀಗೆ ಮಾಡ್ತಾರೆಂದು ಊಹಿಸಲೂ ಆಗದು. ದರ್ಶನ್ ತಪ್ಪು ಮಾಡಿಲ್ಲ ಅಂದ್ರೆ, ಕಳಂಕ ಕಳೆದುಕೊಳ್ಳಲಿ. ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಲಿ" ಎಂದು ತಿಳಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ಜಗ್ಗೇಶ್, ಇಂದ್ರಜಿತ್ ಲಂಕೇಶ್, ಚೇತನ್, ಕಿಚ್ಚ ಸುದೀಪ್, ಉಪೇಂದ್ರ, ಉಮಾಪತಿ, ರಚಿತಾ ರಾಮ್​ ಸೇರಿದಂತೆ ಹಲವರು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಸಂತ್ರಸ್ತರಿಗೆ ಸೂಕ್ತ ನ್ಯಾಯ ಸಿಗಬೇಕು ಎಂದು ತಿಳಿಸಿದ್ದಾರೆ.

ಇನ್ನು ಪ್ರಕರಣದ ತನಿಖೆ ಮುಂದುವರಿದಿದೆ. ಆರೋಪಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಇಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಆಗಮಿಸಿ, ತನಿಖಾಧಿಕಾರಿಗಳ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಮತ್ತೊಂದೆಡೆ, ರೇಣುಕಾಸ್ವಾಮಿ ಮತ್ತು ಆರೋಪಿ ರಾಘವೇಂದ್ರನ ಮೊಬೈಲ್ ಪತ್ತೆಗೆ ಪೊಲೀಸರು ಅಗ್ನಿಶಾಮಕದಳದ ಸಹಾಯ ಪಡೆದಿದ್ದಾರೆ.

Category
ಕರಾವಳಿ ತರಂಗಿಣಿ